ಬೆಳಗಾವಿ :ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭವನ್ನ ಪೊಲೀಸರು ತೆರವು ಮಾಡುತ್ತಾರೆಂಬ ಆತಂಕದಲ್ಲಿ ಇಡೀ ರಾತ್ರಿಯಿಂದಲೂ ಪಟ್ಟು ಬಿಡದ ಕನ್ನಡಪರ ಹೋರಾಟಗಾರರು ಧ್ವಜಸ್ತಂಭಕ್ಕೆ ಹಗ್ಗ ಕಟ್ಟಿಕೊಂಡು ಬಾವುಟದ ಕಾವಲಿಗೆ ಕಾದು ಕುಳಿತಿದ್ದಾರೆ.
ನಗರದ ಪಾಲಿಕೆ ಕಚೇರಿ ಎದುರಿಗೆ ಸೋಮವಾರ ಕನ್ನಡಪರ ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ನೇತೃತ್ವದಲ್ಲಿ ಕನ್ನಡ ಧ್ವಜಸ್ತಂಭ ಸ್ಥಾಪಿಸಲಾಗಿತ್ತು. ಸ್ಥಾಪಿಸಲಾಗಿದ್ದ ಧ್ವಜಸ್ತಂಭವನ್ನು ತೆರವುಗೊಳಿಸಲು ಕನ್ನಡಪರ ಹೋರಾಟಗಾರರ ಮನವೊಲಿಸಲು ಪಾಲಿಕೆ ಅಧಿಕಾರಿಗಳು, ಹಿರಿಯ ಪೊಲೀಸರು ಸಾಕಷ್ಟು ಹರಸಾಹಸ ಪಟ್ಟಿದ್ದರು.
ಧ್ವಜಸ್ತಂಭವನ್ನು ಕಾದು ಕುಳಿತ ಕನ್ನಡಪರ ಹೋರಾಟಗಾರರು ಸ್ವತಃ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಅವರೇ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಇದ್ಯಾವುದಕ್ಕೂ ಜಗ್ಗದ ಕನ್ನಡಪರ ಹೋರಾಟಗಾರರು ಸೋಮವಾರದಿಂದಲೂ ಧ್ವಜಸ್ತಂಭಕ್ಕೆ ಹಾಗೂ ತಮ್ಮ ಕೊರಳಿಗೆ ಹಗ್ಗವನ್ನು ಕಟ್ಟಿ ಕನ್ನಡ ಬಾವುಟದ ಕಾವಲಿಗೆ ಕಾದು ಕುಳಿತುಕೊಂಡಿದ್ದಾರೆ.
ಇತ್ತ ಮುಂಜಾಗ್ರತಾ ಕ್ರಮವಾಗಿ ಮಹಾನಗರ ಪಾಲಿಕೆ ಕಚೇರಿ ಸುತ್ತಲೂ ಬ್ಯಾರಿಕೇಡ್ ಹಾಕಿದ್ದು, ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಧ್ವಜಸ್ತಂಭ ಸ್ಥಾಪನೆ ವಿಚಾರಕ್ಕೆ ಇಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯ ನಿರ್ಣಯಕ್ಕಾಗಿ ಕನ್ನಡಪರ ಹೋರಾಟಗಾರರು ಕಾದು ಕುಳಿತಿದ್ದಾರೆ.