ಬೆಳಗಾವಿ: ಕರ್ನಾಟಕ ನವ ನಿರ್ಮಾಣ ಸೇನೆಯ ನಾಲ್ವರು ಕಾರ್ಯಕರ್ತರು ಜಾಮೀನಿನ ಮೇಲೆ ಇಂದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು.
ಜೈಲಿಂದ ಬಿಡುಗಡೆ ಹೊಂದಿದ ಹೋರಾಟಗಾರರಿಗೆ ಹೊಸ ಶರ್ಟ್, ಪಂಚೆ, ರೇಷ್ಮೆ ಶಾಲು ಹಾಗೂ ಮೈಸೂರು ಪೇಟ ತೊಡಿಸಿ ಬರಮಾಡಿಕೊಳ್ಳಲಾಯಿತು. ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಎಲ್ಲರನ್ನೂ ಅದ್ಧೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಕ್ಷೀರಾಭಿಷೇಕ ಮಾಡುವ ಯತ್ನವನ್ನು ಪೊಲೀಸರು ತಡೆದರು.
ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ, ಸಚಿನ್ ಮಠದ, ರಾಹುಲ್ ಕಲಕಾಂಬಕರ್ 29 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಡಿಸೆಂಬರ್ 13ರಂದು ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಬೆಳಗಾವಿಯಲ್ಲಿ ಮಹಾಮೇಳಾವ್ ಆಯೋಜಿಸಿತ್ತು. ಮಹಾಮೇಳ ನಡೆಯುವ ಸ್ಥಳಕ್ಕೆ ನುಗ್ಗಿ ಎಂಇಎಸ್ ಅಧ್ಯಕ್ಷ ದೀಪಕ್ ಧಳವಿ ಮುಖಕ್ಕೆ ಕನ್ನಡಪರ ಕಾರ್ಯಕರ್ತರು ಮಸಿ ಬಳಿದಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡಪರ ಕಾರ್ಯಕರ್ತರ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು.
ಎಂಇಎಸ್ ಮುಖಂಡರು ನೀಡಿದ ದೂರಿನ ಮೇರೆಗೆ ಟಿಳಕವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪರಿಣಾಮ, ನಾಲ್ವರು ಕನ್ನಡಪರ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಇದೀಗ, ಬೆಳಗಾವಿ ಜಿಲ್ಲಾ ಪ್ರಧಾನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.