ಚಿಕ್ಕೋಡಿ: ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ರೈತರೊಬ್ಬರು ಕಲ್ಲು-ಮುಳ್ಳುಗಳಿಂದ ಕೂಡಿದ್ದ ಸುಮಾರು 7 ಎಕರೆ ಜಮೀನಿನಲ್ಲಿ ಸೀಬೆ ಬೆಳೆದು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಉಗಾರ ಗ್ರಾಮದ ರೈತ ಸುರೇಂದ್ರ, ಒಣ ಭೂಮಿಯನ್ನು ಖರೀದಿಸಿ ಕಲ್ಲು-ಮುಳ್ಳುಗಳಿಂದ ಕೂಡಿದ ಜಮೀನನ್ನು ಹದ ಭೂಮಿಯನ್ನಾಗಿ ಮಾಡಿ, ಆ ಜಮೀನಿನಲ್ಲಿ ಸೀಬೆ ಬೆಳೆಯಲು ನಿರ್ಧರಿಸಿದರು. ಹಣ್ಣಿನ ಸಸಿಗಾಗಿ ಅನೇಕ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಿ ಕೊನೆಗೂ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾರಂಭದಲ್ಲಿ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಸಸಿಗಳನ್ನು ನೆಟ್ಟ ಅವರು, ಡೊಣ್ಣೆ ಹುಳುವಿನ ಕಾಟದಿಂದ ಸುಮಾರು 1,500ಕ್ಕೂ ಅಧಿಕ ಸಸಿಗಳನ್ನು ಕಳೆದುಕೊಂಡರೂ ಧೃತಿಗೆಡದೆ ತಮ್ಮ ಕಾರ್ಯವನ್ನು ಮುಂದುವರೆಸಿ ಯಶಸ್ಸು ಕಂಡಿದ್ದಾರೆ.
'ಸೀಬೆ' ಬೆಳೆದ ರೈತ ಸುರೇಂದ್ರ ಹುಳುಗಳ ಬಾಧೆಯಿಂದ ಬೇಸತ್ತ ಇವರು, ಇದಕ್ಕೆ ಪರಿಹಾರ ಹುಡುಕುವ ಸಲುವಾಗಿ ಮನೆಯಲ್ಲಿ ನಾಲ್ಕೈದು ದೇಸಿ ಆಕಳುಗಳನ್ನು ಸಾಕಿ, ಅವುಗಳ ಮೂತ್ರ ಸಂಗ್ರಹಿಸಿ, ಡ್ರಿಪ್ ಮೂಲಕ ಗಿಡಗಳ ಬುಡಕ್ಕೆ ಬಿಟ್ಟಿದ್ದರ ಪರಿಣಾಮವಾಗಿ ಹುಳುಗಳು ನಿಯಂತ್ರಣಕ್ಕೆ ತರುವಲ್ಲಿ ಸಫಲರಾದರು. ಥಾಯಿ ಪೇರಲೆ ಗಿಡಗಳು ಪ್ರಾರಂಭದಲ್ಲಿ ಒಂದು ಅಡಿಯಿಂದ 4 ಅಡಿಯವರೆಗೆ ಬಂದ ನಂತರ ಅವುಗಳನ್ನು ಕಟ್ ಮಾಡುತ್ತಿದ್ದರು. ಇದೀಗ ಅದರ ಫಲವಾಗಿಯೇ ಎಂಬಂತೆ ಪ್ರತಿ ಗಿಡದಲ್ಲೂ 300ರಿಂದ 400 ಗ್ರಾಂಗಳಷ್ಟು ತೂಕದ ಹಣ್ಣುಗಳು ಸಮೃದ್ಧವಾಗಿ ಬೆಳೆದು ನಿಂತಿವೆ.
ಓದಿ:ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚಿಸುತ್ತಿದ್ದ ಇಬ್ಬರ ಬಂಧನ
ಸಾವಯವ ಕೃಷಿಗೆ ಒತ್ತು:ತಮ್ಮ ಜಮೀನಿನಲ್ಲಿ ಮೊದಲಿನಿಂದಲೂ ಸಾವಯವ ಕೃಷಿಗೆ ಒತ್ತನ್ನು ನೀಡುತ್ತಾ ಬಂದಿರುವುದರಿಂದ ಕಾಯಿಗಳನ್ನು ಒಂದು ವಾರ ಕಟಾವು ಮಾಡಿ ಹಾಗೆಯೇ ಇಟ್ಟರೂ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಹೀಗಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ಸದ್ಯ ಕೆಜಿಗೆ 70 ರೂಪಾಯಿಯಂತೆ ಬೇರೆ ರಾಜ್ಯಗಳಿಗೆ ಮಾರಾಟವಾಗುತ್ತಿದೆ. ಅಲ್ಲದೆ, ನೇರವಾಗಿ ಸುರೇಂದ್ರ ಅವರ ಹೊಲಕ್ಕೆ ವ್ಯಾಪಾರಸ್ಥರು ಖರೀದಿಗೆ ಬರುತ್ತಿರುವುದರಿಂದ ಎಕರೆಗೆ 5ರಿಂದ 7 ಲಕ್ಷ ರೂ.ವರೆಗೆ ಲಾಭ ಬರುವುದಂತೂ ಖಚಿತ ಎಂದು ತಿಳಿಸಿದ್ದಾರೆ.