ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗಿದೆ. ಕರ್ನಾಟಕ ಪ್ರವೇಶ ಮಾಡುತ್ತಾ ಎಂಬ ಪ್ರಶ್ನೆ ನಡುವೆ ಗಡಿಯಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ತೋರಿದೆ. ಇದರಿಂದ ಗಡಿಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿ ಕರ್ನಾಟಕಕ್ಕೆ ಬರಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಗಡಿ ಕಾಗವಾಡದಲ್ಲಿ ಕಾಟಾಚಾರಕ್ಕೆ ಕೊರೊನಾ ತಪಾಸಣೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಮಹಾರಾಷ್ಟ್ರದಿಂದ ಕರ್ನಾಟಕ ಗಡಿಗೆ ಬಸ್ ಮೂಲಕ ಜನರನ್ನು ಮಹಾರಾಷ್ಟ್ರ ಸಾರಿಗೆ ತಂದು ಬಿಡುತ್ತಿದೆ. ಕಣ್ಣು ಮುಂದೆಯೇ ಅವಾಂತರ ನಡೆಯುತ್ತಿದ್ದರೂ ತನಗೇನು ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಜಿಲ್ಲೆಯ ಕಾಗವಾಡ, ಅಥಣಿ, ರಾಯಬಾಗ ಭಾಗದ ನೂರಾರು ಜನರು ದಿನಗೂಲಿ ಮಾಡಲು ಪಕ್ಕದ ಮಹಾರಾಷ್ಟ್ರಕ್ಕೆ ಹೋಗುತ್ತಾರೆ. ಬಸ್ನಲ್ಲಿ ಬಂದವರ ರಿಪೋರ್ಟ್ ಚೆಕ್ ಮಾಡದೇ ಜಾಣ ಕುರುಡರಾಗಿ ಅಧಿಕಾರಿಗಳು ಗಡಿಯೊಳಗೆ ಪ್ರವೇಶ ನೀಡುತ್ತಿದ್ದಾರೆ.
ಆದರೆ, ನಾವು ದಿನಾಲು ಮಹಾರಾಷ್ಟ್ರಕ್ಕೆ ಹೋಗುತ್ತೇವೆ. ಎರಡು ದಿನಕ್ಕೆ ಎಷ್ಟು ಸಲ ಕೊರೊನಾ ರಿಪೋರ್ಟ್ ತೆಗೆದುಕೊಳ್ಳುವುದು. ನಮಗೆ ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.