ಬೆಳಗಾವಿ: ನಮ್ಮ ಪುಣ್ಯಕ್ಕೆಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ. ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಲ್ಲಾಪುರದ ಕನ್ನೇರಿ ಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶ. ಸುಮಾರು 400 - 500 ಮಠಾಧೀಶರು ಭಾಗಿಯಾಗಿದ್ದಾರೆ. ಮತ್ತಷ್ಟು ಮಠಾಧೀಶರು ಬರುತ್ತಿದ್ದಾರೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣವಾಗಿವೆ. ನಾವು ಮಠಗಳ ಮಾಲೀಕರಲ್ಲ, ವ್ಯವಸ್ಥಾಪಕರು. ಸಂಸ್ಕಾರ ಕೊಡುವ ಕೆಲಸ ಸ್ವಾಮೀಜಿಗಳು ಮಾಡಬೇಕು. ಗುರುಗಳು ಮತ್ತು ಭಕ್ತರ ಅಂತರ ಕಡಿಮೆ ಆಗಬೇಕು. ಗುರುಗಳು ಭಕ್ತರ ಸಮೀಪ ಹೋಗಬೇಕು ಎಂದು ಸಲಹೆ ನೀಡಿದರು.
ಭಕ್ತರಿಗಾಗಿ ಕೆಲಸ ಮಾಡಬೇಕು: ದೇಶದಲ್ಲಿ 50 ಲಕ್ಷ ದೇವಸ್ಥಾನ, 10 ಲಕ್ಷ ಮಠ ಹಾಗೂ ಆಶ್ರಮಗಳಿವೆ. ಒಂದೊಂದು ಮಠದಿಂದ ಒಂದೊಂದು ಗ್ರಾಮ ದತ್ತು ತೆಗೆದುಕೊಂಡರೆ ದೇಶ ಸುಧಾರಣೆ ತುಂಬಾ ಸುಲಭವಾಗುತ್ತದೆ. ರೈತರು ಮಠಗಳನ್ನು ಕಟ್ಟುತ್ತಾರೆ. ಮಠಗಳು ಭಕ್ತರಿಗಾಗಿ ಕೆಲಸ ಮಾಡಬೇಕು. ಭಕ್ತರ ಹಿತಕ್ಕಾಗಿ ಏನೇನು ಚಟುವಟಿಕೆ ಮಾಡಬೇಕು ಎಂದು ಆಗಾಗ ಕಾರ್ಯಕ್ರಮ ಮಾಡುತ್ತೇವೆ.