ಕರ್ನಾಟಕ

karnataka

ETV Bharat / state

'ಆ' ಮಾತನ್ನು ವಾಪಸ್ ಪಡೆದಿದ್ದೇನೆ: ಕೆ.ಎಸ್. ಈಶ್ವರಪ್ಪ

ನೀವಾಗೇ ನೀವು ಯಾರನ್ನೂ ಹೊಡಿಬೇಡಿ. ನಿಮ್ಮ ಹೊಡೆದವರನ್ನು ಬಿಡಬೇಡಿ. ಫೇಸ್ ವಿತ್ ಸೇಮ್ ಸ್ಟಿಕ್ ಅಂತಾ ಹೇಳಿದ್ರು. ಇದನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಾನು ಹೇಳಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

k-s-eshwarappa
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ

By

Published : Aug 10, 2021, 9:48 PM IST

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ದ ಆಡಿದ್ದ ಆ ಮಾತನ್ನು ವಾಪಸ್ ಪಡೆದಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸಿಟ್ಟಿನ ಭರದಲ್ಲಿ ನಾನು ಆ ರೀತಿ ಹೇಳಿಕೆಯನ್ನು ನೀಡಿದ್ದೇನೆ ಅದನ್ನು ವಾಪಸ್ ಪಡೆಯುತ್ತೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ಕಾಂಗ್ರೆಸ್ ನಾಯಕರ ವಿರುದ್ದ ಅವಾಚ್ಯ ಶಬ್ದ ಬಳಸಿ ಟೀಕೆಗೆ ಗುರಿಯಾಗಿದ್ದರು.

ಅವಾಚ್ಯ ಶಬ್ದ ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿದರು. ಪ್ರತಿಭಟನೆ ಮಾಡಲಿ ಸಂತೋಷ. ಹಿಂದೆ ಭಾರತೀಯ ಜನಸಂಘ ಅಧ್ಯಕ್ಷ ದೀನದಯಾಳ್​ ಉಪಾಧ್ಯ ಕಗ್ಗೊಲೆ ಆಯ್ತು. ಆಗ ನಮ್ಮ ಹತ್ತಿರ ಶಕ್ತಿ ಇರಲಿಲ್ಲ. ಆಗ ಇಡೀ ರಾಷ್ಟ್ರೀಯ ನಾಯಕರು ಶಾಂತಿಯಿಂದ ಇರಿ ಎಂದಿದ್ರು. ಕೇರಳದಲ್ಲಿ ಆರ್‌ಎಸ್‌ಎಸ್ ಕಚೇರಿ ಮೇಲೆ ಅದೇ ರೀತಿ ದಾಳಿ ಮಾಡಲಾಯಿತು.

ಆಗ ನಮ್ಮ ಹಿರಿಯರು ಯಾವುದೇ ಕಾರಣಕ್ಕೂ ಸುಮ್ಮನಿರಬೇಡಿ ಎಂದರು. ನೀವಾಗೇ ನೀವು ಯಾರನ್ನೂ ಹೊಡಿಬೇಡಿ, ನಿಮ್ಮ ಹೊಡೆದವರನ್ನು ಬಿಡಬೇಡಿ. ಫೇಸ್ ವಿತ್ ಸೇಮ್ ಸ್ಟಿಕ್ ಅಂತಾ ಹೇಳಿದ್ರು. ಇದನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಾನು ಹೇಳಿದ್ದೇನೆ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ

ಕಾಂಗ್ರೆಸ್ ಪಕ್ಷದವರು ಒಪ್ತಾರಾ?: ಸುಲಭ ಶೌಚಾಲಯಗಳಿಗೆ ನರೇಂದ್ರ ಮೋದಿ ಹೆಸರಿಡಬೇಕು ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ಮೇಲೆ ನನಗೂ ಸಿಟ್ಟು ಬಂತು. ಹೀಗಾಗಿ ನಾನು ಆ ಪದ ಬಳಸಿದ್ದೇನೆ. ಆ ಒಂದು ಪದ ತಪ್ಪು. ಸಿಟ್ಟಿನ ಭರದಲ್ಲಿ ಹೇಳಿರುವ ಆ ಪದವನ್ನು ವಾಪಸ್​ ಪಡೆಯುತ್ತೇನೆ. ನರೇಂದ್ರ ಮೋದಿ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕು ಅಂತಾ ಹೇಳಿದ್ದನ್ನು ಕಾಂಗ್ರೆಸ್ ಪಕ್ಷದವರು ಒಪ್ತಾರಾ?. ಅದನ್ನೇ ಇಮಿಡಿಯೇಟ್​ ಆಗಿ ಹೇಳಿದ್ದೇನೆ ಎಂದು ತಿಳಿಸಿದರು.

ಪದ ಬಳಕೆಗೆ ಕ್ಷಮೆಯಾಚಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಒಂದ್ಸಾರಿ ಆಗಿ ಹೋಯ್ತಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಅದೇ ಮಾಡಕ್ಕಾಗುತ್ತಾ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಏಕೆ ಸೋತರು?: ಚುನಾವಣೆಗೂ ಒಂದು ವರ್ಷ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡ್ತೀವಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಕುರಿತು ಅವರು ಮಾತನಾಡಿದರು. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ರು. ಬಾರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಅಂದರು. ಹಾಗಾದರೆ ಚುನಾವಣೆಯಲ್ಲಿ ಏಕೆ ಸೋತರು ಎಂದು ಪ್ರಶ್ನಿಸಿದರು.

ನಮಗೆ ಪೂರ್ಣ ಬಹುಮತ ಇರಲಿಲ್ಲ: ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ್ರು, ಸರ್ಕಾರ ಬಿದ್ದೋಯ್ತು. ಈಗ ಒಂದು ವರ್ಷ ಮುಂಚೆ ಅಭ್ಯರ್ಥಿ ಘೋಷಣೆ ಮಾಡ್ತೀನಿ ಅಂತಿದ್ದಾರೆ. ಅದು ಅವರ ಪಕ್ಷದ ತೀರ್ಮಾನ ಯಾವಾಗ ಬೇಕಾದರೂ ಮಾಡಬಹುದು. ರಾಜ್ಯದ ಜನ ಬಿಜೆಪಿಗೆ ಅಧಿಕಾರವನ್ನು ಪೂರ್ಣವಾಗಿ ಎಂದೂ ಕೊಡಲಿಲ್ಲ. ಆದರೆ, ಆಡಳಿತ ಮಾಡಿ ಅಂದ್ರು. ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆದ್ರು. ಆದರೆ ನಾಲ್ಕು ಬಾರಿ ನಮಗೆ ಪೂರ್ಣ ಬಹುಮತ ಇರಲಿಲ್ಲ ಎಂದು ಹೇಳಿದರು.

ಎಲ್ಲರನ್ನೂ ಕರೆದು ಮಾತನಾಡುತ್ತಿದ್ದಾರೆ: ಈ ಬಾರಿ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಇಡೀ 224 ಕ್ಷೇತ್ರಕ್ಕೂ ಹೋಗ್ತೇವೆ. ಸಂಘಟನೆ ಶಕ್ತಿ ಮೇಲೆ ಪೂರ್ಣ ಬಹುಮತ ತರುವ ಪ್ರಯತ್ನ ಮಾಡುತ್ತೇವೆ. ಖಾತೆ ಹಂಚಿಕೆ ಬಗ್ಗೆ ಕೆಲ ಸಚಿವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಎಲ್ಲರನ್ನೂ ಕರೆದು ಮಾತನಾಡುತ್ತಿದ್ದಾರೆ. ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಹಣ ಬಿಡುಗಡೆ ಮಾಡ್ತೇವೆ:ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡದ ವಿಚಾರದ ಕುರಿತು ಅವರು ಮಾತನಾಡಿದರು. ನಿನ್ನೆಯಷ್ಟೇ ದೇವರೇ, ಶಿವನೇ ಅಂತಾ ಸರ್ಕಾರ ಬಂದಿದೆ.‌ ಬರ್ತಿದ್ದ ಹಾಗೆ ನೆರೆಹಾನಿ ಬಗ್ಗೆ ಇನ್ನೂ ವರದಿ ಬಂದಿಲ್ಲ. ವರದಿ ಬಂದಮೇಲೆ ಎಷ್ಟು ನಷ್ಟ ಆಗಿದೆ ನೋಡುತ್ತೇವೆ. ವರದಿ ಬಂದ ಮೇಲೆ ಖಂಡಿತ ಹಣ ಬಿಡುಗಡೆ ಮಾಡ್ತೇವೆ ಎಂದು ತಿಳಿಸಿದರು.

ಸಿಎಂ ಜತೆ ಚರ್ಚಿಸಿ ತೀರ್ಮಾನ : ಈಗಾಗಲೇ ಇಡೀ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಸರ್ವೇ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ವರದಿ ಕಳಿಸುತ್ತಿದ್ದಾರೆ. ಕಳೆದ ಬಾರಿ ಪ್ರವಾಹ ವೇಳೆ 1,800 ಕೋಟಿ ರೂಪಾಯಿ ರಸ್ತೆ ದುರಸ್ತಿಗಾಗಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಬೇಕೆಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಓದಿ:ವರ್ಷವಾರು 10 ರೂಪಾಯಿಯ ನಾಣ್ಯ ಸಂಗ್ರಹಿಸಿ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲಿ ಸಾಧನೆ ಮಾಡಿದ ಕಾರವಾರದ ವಿದ್ಯಾರ್ಥಿ

ABOUT THE AUTHOR

...view details