ಬೆಳಗಾವಿ: ಜನರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತು.
ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಉತ್ಸಾಹದಿಂದ ಭಾಗವಹಿಸಿದರು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಸುಮಾರು 2 ತಾಸುಗಳ ಕಾಲ ಗ್ರಾಮದ ಓಣಿ ಓಣಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜನರಿಂದ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಪಡೆದು, ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಮಾಶಾಸನ, ಬಸ್ ಸೌಕರ್ಯ, ವಿದ್ಯುಚ್ಛಕ್ತಿ ಸಮಸ್ಯೆ, ವಸತಿ ವಿಷಯಗಳು ಸೇರಿದಂತೆ 210 ಕ್ಕೂ ಅಧಿಕ ಅಹವಾಲುಗಳನ್ನು ಗ್ರಾಮಸ್ಥರು ಸಲ್ಲಿಸಿದರು.
ಗರ್ಭಿಣಿಯರಿಗೆ ಸೀಮಂತ; ಮಕ್ಕಳಿಗೆ ಅನ್ನಪ್ರಾಶನ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬೈಲವಾಡ ಗ್ರಾಮದ ಐದು ಜನರಿಗೆ ಸಂಪ್ರದಾಯದ ಪ್ರಕಾರ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು. ಬಳಿಕ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ 30ಕ್ಕೂ ಅಧಿಕ ಕುಟುಂಬಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಇತರ ಅಧಿಕಾರಿಗಳು ವಿತರಿಸಿದರು.