ಕರ್ನಾಟಕ

karnataka

ETV Bharat / state

ಸಿಡಿ ಬಗ್ಗೆ ಮಕ್ಕಳು ನನಗೆ ಪ್ರಶ್ನೆ ಕೇಳ್ತಾರೆ, ನಾನೇನು ಹೇಳಲಿ?: ಸಿಎಂ ಇಬ್ರಾಹಿಂ

"ರಮೇಶ್ ಜಾರಕಿಹೊಳಿ ಸತ್ಯ ಒಪ್ಪಿಕೊಂಡಿದ್ದಾರೆ. ಅವರಿಗೆ ತಪ್ಪಿನ ಅರಿವಾಗಿದೆ. ಹಾಗಾಗಿ ನಾನು ಧನ್ಯವಾದ ಸಲ್ಲಿಸುವೆ" ಎಂದು ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

JDS State President CM Ibrahim reaction On CD Case
JDS State President CM Ibrahim reaction On CD Case

By

Published : Feb 2, 2023, 6:17 PM IST

Updated : Feb 2, 2023, 9:06 PM IST

ಸಿ.ಎಂ.ಇಬ್ರಾಹಿಂ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನಡುವಿನ ಸಿಡಿ ಸಮರದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಖಾನಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಕುರಿತು ಬಾಯಿಗೆ ಬಂದಹಾಗೆ ಮಾತನಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದ ನಾಯಕರ ಹೇಳಿಕೆಗೆ ಕೆಂಡಕಾರಿದರು.

"ಸಿಡಿ ಕುರಿತಾಗಿ ಮಕ್ಕಳು ನನಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿಡಿ ಅಂದ್ರೆ ಏನು? ಅದರಲ್ಲೇನಿದೆ? ಎಂಬಂತಹ ಹತ್ತಾರು ಪ್ರಶ್ನೆಗಳನ್ನು ನನ್ನ ಮುಂದಿಡುತ್ತಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಏನು ಉತ್ತರ ನೀಡಲಿ? ಸಿಡಿ ಬಗ್ಗೆ ಹೇಳಿಕೆ ನೀಡುತ್ತಿರುವ ಜೀವಕ್ಕೆ ಬೆಂಕಿ ಹಾಕ, ಸಿಡಿ ಏಕೆ ತೆಗೆದ್ರು? ಏಕೆ ತೆಗೀತಾರೆ? ಇವು ರಾಷ್ಟ್ರೀಯ ಪಕ್ಷಗಳಾ? ಥೂ..ಥೂ.." ಎಂದರು.

"ಇವರ ಮೇಲಿರುವ ಪಕ್ಷದ ಮುಖಂಡರಿಗಾದರೂ ಮರ್ಯಾದೆ, ಬುದ್ಧಿ ಇಲ್ವಾ?, ಒಬ್ಬರು ವಿಷಕನ್ಯೆ ಅಂತಾರೆ, ಮತ್ತೊಬ್ಬರು ನಾಗಕನ್ಯೆ ಅಂತಾರೆ. ಏನ್ರೀ ಇದು? ಡಿ.ಕೆ.ಶಿವಕುಮಾರ್ ಹೇಳುವುದೂ ಸತ್ಯ. ರಮೇಶ್ ಜಾರಕಿಹೊಳಿ ಹೇಳುವುದೂ ಸತ್ಯ. ಆದರೆ, ಜನ ಇವರನ್ನು ಅರ್ಥ ಮಾಡಿಕೊಳ್ಳಬೇಕು. ಯಾರಿಗೆ ಅಧಿಕಾರ ಕೊಡಬೇಕು ಅನ್ನೋದನ್ನು ತೀರ್ಮಾನ ಮಾಡಬೇಕು. ಇವತ್ತು ಜನತಾದಳದವರು ಬೇಲ್‌ದಾಗೂ ಇಲ್ಲ, ಜೇಲ್‌ದಾಗೂ ಇಲ್ಲ. ಜಿಲ್ಲೆಯ ಮರ್ಯಾದೆಯನ್ನು ಉಳಿಸುವುದು ಮತದಾರರ ಕೈಯಲ್ಲಿದೆ. ಹಾಗಾಗಿ ಕೈಮುಗಿದು ಕೇಳುವೆ. ಸಂಸ್ಕೃತಿ ಉಳಿಸಿಕೊಳ್ಳುವ ಮೂಲಕ ಇವರನ್ನು ಹೊರಗೆ ಹಾಕಿ" ಎಂದು ಮನವಿ ಮಾಡಿದರು.

"ಸಿಡಿ ಪ್ರಕರಣವನ್ನು ಸಿಬಿಐ ತನಿಖೆ ಮಾಡಲಿ ಅಂತ ಜನರೂ ಹೇಳುತ್ತಿದ್ದಾರೆ. ಮಾನ, ಮರ್ಯಾದೆ ಇದ್ದರೆ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು. ಸಜ್ಜನರು ಮತ್ತು ಮರ್ಯಾದಸ್ಥ ನಾಯಕರನ್ನು ನೀಡಿದ ಊರು ಈ ಬೆಳಗಾವಿ ಜಿಲ್ಲೆ. ಬಸವಾದಿ ಶರಣರು ಹಾಗೂ ಸೂಫಿ ಸಂತರಿಗೆ ಜನ್ಮ ಕೊಟ್ಟ ಕುಂದರನಾಡು ಇದು. ಕೆಎಲ್‌ಇ ಸ್ಥಾಪನೆಯಾದಂತಹ ವಿದ್ಯಾ ಭಂಡಾರ ಇಲ್ಲಿದೆ. ಜಿಲ್ಲೆಯ ಮರ್ಯಾದೆಯನ್ನು ಉಳಿಸಿಕೊಳ್ಳುವಂಥ ನಾಯಕರು ಯಾರೂ ಇಲ್ಲ. ಕಿತ್ತೂರು ಚನ್ನಮ್ಮ ಪರಂಪರೆ ಕುಟುಂಬ ಅಂತಾ ಹೇಳಿಕೊಳ್ಳುವ ಅರ್ಹತೆ ಇಲ್ಲಿನ ಯಾವ ನಾಯಕರಿಗೂ ಇಲ್ಲ. ದಯವಿಟ್ಟು ಆ ತಾಯಿಯ ಹೆಸರನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬೇಡಿ. ಒಂದು ವೇಳೆ ದುರುಪಯೋಗ ಪಡಿಸಿಕೊಂಡರೆ ನಾನೇ ಕೋರ್ಟ್‌ಗೆ ಹೋಗಬೇಕಾಗುತ್ತೆ" ಎಂದರು.

"ನ್ಯಾಯಾಲಯಕ್ಕೆ ಹೋಗಿ ಸಿಡಿ ತೋರಿಸಬಾರದು ಅಂತಾ ತಡೆಯಾಜ್ಞೆ ತಂದಿದ್ದಾರೆ. ಆ ಸಿಡಿಯಲ್ಲಿ 12 ಜನ ಮಂತ್ರಿಗಳಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಮಂತ್ರಿಗಳು ಬೇಕಾ? ಇಂತಹ ಮಂತ್ರಿಗಳು, ಇಂತಹ ಸಿಡಿಗಳು ಇದ್ರೆ ಯಾವುದೇ ಕೋವಿಡ್ ಆಗಲೀ ಅಥವಾ ಅತಿವೃಷ್ಟಿಯೂ ಬರಲ್ಲ. ಯಥಾ ರಾಜಾ ತಥಾ ಪ್ರಜಾ" ಎಂದು ವ್ಯಂಗ್ಯವಾಡಿದರು.

ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ರಾಜಕಾರಣ ಎಷ್ಟರ ಮಟ್ಟಿಗೆ ಸರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, "ಇವರು ಮಾಡಿಕೊಂಡೇ ಬಂದಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಸತ್ಯ ಒಪ್ಪಿಕೊಂಡಿದ್ದಾರೆ. ಅವರ ತಪ್ಪು ಅವರಿಗೆ ಅರಿವಾಗಿದೆ. ಹಾಗಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುವೆ" ಎಂದರು.

ಇದನ್ನು ಓದಿ:ಸಿಡಿ ಪ್ರಕರಣ: ಸಿಬಿಐ ತನಿಖೆ ಕುರಿತು ಸಿಎಂ ಜೊತೆ ಚರ್ಚಿಸಿ ನಿರ್ಧಾರ- ಆರಗ ಜ್ಞಾನೇಂದ್ರ

Last Updated : Feb 2, 2023, 9:06 PM IST

ABOUT THE AUTHOR

...view details