ಬೆಳಗಾವಿ :ಮಹಾನಗರ ಪಾಲಿಕೆಯ 58 ವಾರ್ಡ್‍ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ನ 58 ವಾರ್ಡ್ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಆದೇಶದಂತೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಬೆಳಗಾವಿಯ ಅಭಿವೃದ್ಧಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಮಹತ್ತರವಾಗಿದೆ. ಬೆಳಗಾವಿಯಲ್ಲಿ ಅವರ ಸರ್ಕಾರವಿದ್ದಾಗ ಅಧಿವೇಶನ ಆಯೋಜಿಸಲಾಗಿತ್ತು. ಆದರೆ, ಆ ನಂತರ ಬಂದ ಯಾವುದೇ ಸರ್ಕಾರಗಳು ಅಧಿವೇಶನ ಆಯೋಜಿಸಿಲ್ಲ. ಈ ಬಾರಿ ಎಲ್ಲ ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಇನ್ನು, ಚುನಾವಣಾ ಪ್ರಚಾರಕ್ಕೆ ಎಲ್ಲ ವರಿಷ್ಠರು ಬೆಳಗಾವಿಗೆ ಆಗಮಿಸಲಿದ್ದಾರೆಂದು ಅವರು ತಿಳಿಸಿದರು.
ಓದಿ:CAA ವಿರೋಧಿಸುವವರು ಅಫ್ಘಾನಿಸ್ತಾನದ ಸ್ಥಿತಿ ನೋಡಿ ತಿಳಿದುಕೊಳ್ಳಲಿ: ಸಂಸದ ಪ್ರತಾಪ್ ಸಿಂಹ
ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಕಣಕ್ಕೆ :ಆಮ್ ಆದ್ಮಿ ಪಕ್ಷ ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ಗಳಲ್ಲೂ ಕಣಕ್ಕೆ ಇಳಿಯಲಿದ್ದು, ಈಗಾಗಲೇ 20 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಳಗಾವಿ ಉಸ್ತುವಾರಿ ಲಕ್ಷ್ಮಿಕಾಂತ ರಾವ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದೆಹಲಿ ಬದಲಾ ಹೈ.. ಬೆಳಗಾವಿ ಬದಲೇಗಾ.. ಎಂಬ ಘೋಷಣೆಯೊಂದಿಗೆ ಪೊರಕೆ ಗುರುತಿನೊಂದಿಗೆ ಚುನಾವಣೆ ಎದುರಿಸಲಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ಗಳಲ್ಲಿ ಚುನಾವಣೆ ಎದುರಿಸಲಿದೆ. ಮೊದಲ ಹಂತದಲ್ಲಿ 20 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಅಪರಾಧ ಕೃತ್ಯಗಳು, ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಆಮ್ ಆದ್ಮಿ ಟಿಕೆಟ್ ನೀಡಿಲ್ಲ. ಆಮ್ ಆದ್ಮಿ ಪಾರ್ಟಿಯ ಪಾಲಿಕೆಯ ಚುನಾವಣೆಯಲ್ಲಿ ಕಣದಲ್ಲಿರುವ ಯಾರಾದರೂ ಅಪರಾಧ ಕೃತ್ಯದಲ್ಲಿ ಭಾಗಿಯಾದವರು ಕಂಡು ಬಂದರೆ, ತಕ್ಷಣವೇ ಅವರ ಟಿಕೆಟ್ ಹಿಂಪಡೆಯಲಾಗುವುದು ಎಂದರು.
ಆಮ್ ಆದ್ಮಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಈಗಾಗಲೇ ಇರುವ ರಾಜಕೀಯ ಪಕ್ಷದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪಾಲಿಕೆ ಚುನಾವಣಾ ಪ್ರಚಾರಕ್ಕೆ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್, ರೋಮಿ ಭಾಟಿ ಸೇರಿದಂತೆ ಇತರ ಮುಖಂಡರು ಬರಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರ ಬೆದರಿಕೆ ಕರೆ :ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ ಟಿ ನಾಗಣ್ಣ ಮಾತನಾಡಿ, ಆಮ್ ಆದ್ಮಿ ಪಾರ್ಟಿಯ ಮುಖಂಡರಿಗೆ ಕಾಂಗ್ರೆಸ್ ಮುಖಂಡರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ವರ್ತನೆಯಲ್ಲ. ಇನ್ನೊಂದು ಬಾರಿಗೆ ಬೆದರಿಕೆ ಹಾಕಿದ್ರೆ ಪರಿಸ್ಥಿತಿ ಸರಿ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದರು.