ಬೆಳಗಾವಿ:ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಅವರ ಸ್ವಕ್ಷೇತ್ರ ಗೋಕಾಕಿನಲ್ಲಿ ಚಡ್ಡಿ ಹಿಡಿದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗೋಕಾಕಿನಲ್ಲಿ ಚಡ್ಡಿ ಹಿಡಿದು ಪ್ರತಿಭಟನೆ ಜಿಲ್ಲೆಯ ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಚಿವ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ರಮೇಶ್ ಜಾರಕಿಹೊಳಿ ಅವರು ಅದು ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಯನ್ನು ನಂಬಲಾಗದ ಸ್ಥಿತಿಯಲ್ಲಿ ಆ ದೃಶ್ಯಾವಳಿಗಳಿವೆ, ಅದು ನಾಲ್ಕು ಜನರ ಮುಂದೆ ಮಾಡುವಂತಹ ಕೆಲಸವೂ ಅಲ್ಲ. ಅವರಿಬ್ಬರೇ ಇದ್ದಾಗ ಆ ದೃಶ್ಯಾವಳಿಗಳನ್ನು ನಂಬಬೇಕು. ಅದನ್ನು ಬಿಟ್ಟು ಯಾರು ಸಾಕ್ಷಿ ಹೇಳುತ್ತಾರೆ ಎಂದು ಗುಡುಗಿದರು.
ಓದಿ: ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ: ಬಾಲಚಂದ್ರ ಜಾರಕಿಹೊಳಿ ಒತ್ತಾಯ
ವಿಡಿಯೋದಲ್ಲಿರುವುದು ಸತ್ಯವೋ, ಅಸತ್ಯವೋ ತನಿಖೆ ನಂತರ ಸತ್ಯ ಹೊರ ಬರಬೇಕಾದರೆ ಎರಡರಿಂದ ಮೂರು ವರ್ಷವೇ ಬೇಕು. ಸಚಿವ ರಮೇಶ್ ಜಾರಕಿಹೊಳಿ ಮೇಲೆ ಗುರುತರ ಆರೋಪ ಬಂದಿದೆ. ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.