ಚಿಕ್ಕೋಡಿ(ಬೆಳಗಾವಿ): ರಾಜ್ಯದ ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉದ್ಭವಿಸಿದೆ. ಜತ್ತ ತಾಲೂಕಿನ ಬಸರಗಿ, ಉಮರಾಣಿ, ಸಿಂಧೂರ, ಗೂಗವಾಡ ಗ್ರಾಮಗಳಲ್ಲಿ ಹೆಚ್ಚಾಗಿ ಕನ್ನಡಿಗರೇ ನೆಲೆಸಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಇಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನೊಂದಿಗೆ ದಿನ ಬಳಕೆ ನೀರೂ ಸಿಗುತ್ತಿಲ್ಲ. ಹೀಗಾಗಿ ಇಲ್ಲಿನ ಕನ್ನಡಿಗರು ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಕಳೆದ ಆಗಸ್ಟ್‌ನಿಂದ ಮಹಾರಾಷ್ಟ್ರ ಸರ್ಕಾರ ಇಲ್ಲಿರುವ ಜನರಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದೆ. ಆದರೆ ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್ ನೀರು ಬರುತ್ತಿದ್ದು ಕುಡಿಯಲು ಮತ್ತು ದಿನ ಬಳಕೆಗೆ ಇದು ಸಾಲುತ್ತಿಲ್ಲ ಎಂದು ಜನರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಗಡಿ ಕನ್ನಡಿಗರ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದು, ಕರ್ನಾಟಕ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಮನವಿ ಮಾಡುತ್ತಿದ್ದಾರೆ.
'ನಮ್ಮನ್ನು ಕರ್ನಾಟಕಕ್ಕೆ ಬರಮಾಡಿಕೊಳ್ಳಲಿ': ಬಸರಗಿ ಗ್ರಾಮದ ಸ್ಥಳೀಯರಾದ ಅಪ್ಪಾಸಾಬ ಮುಲ್ಲಾ ಮಾತನಾಡಿ, "ನಾವು ಮೂಲತಃ ಕನ್ನಡಿಗರೇ. ಆದರೆ ಭಾಷಾವಾರು ಪ್ರಾಂತ್ಯದ ವಿಭಜನೆ ಸಂದರ್ಭದಲ್ಲಿ ನಮಗೆ ಅನ್ಯಾಯವಾಗಿ ನಾವು ಇಲ್ಲೇ ಉಳಿದಿದ್ದೇವೆ. ಮಹಾರಾಷ್ಟ್ರ ಸರ್ಕಾರ ನಮಗೆ ಮೂಲಭೂತ ಸೌಕರ್ಯವನ್ನೂ ನೀಡುತ್ತಿಲ್ಲ. ಇಲ್ಲಿ ಕೆರೆ-ಕಟ್ಟೆಗಳು ತುಂಬುತ್ತಿಲ್ಲ. ಇದರಿಂದ ನೀರಾವರಿಗೆ ನಮಗೆ ತುಂಬಾ ತೊಂದರೆಯಾಗಿದೆ. ಕುಡಿಯುವ ನೀರಿಗೂ ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಎಂಟು ದಿನಕ್ಕೆ ಒಮ್ಮೆ ಮಹಾರಾಷ್ಟ್ರ ಸರ್ಕಾರ ನಮಗೆ ನೀರು ಸರಬರಾಜು ಮಾಡುತ್ತಿದ್ದು, ಇದು ಯಾವುದಕ್ಕೂ ಸಾಲುತ್ತಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮನ್ನು ಕರ್ನಾಟಕಕ್ಕೆ ಬರಮಾಡಿಕೊಳ್ಳಲಿ ಅಥವಾ ಪಕ್ಕದ ಹಳ್ಳಿಗಳಿಂದ ನಮಗೆ ನೀರನ್ನು ಹರಿಸಲಿ" ಎಂದು ಅಳಲು ತೋಡಿಕೊಂಡರು.