ಚಿಕ್ಕೋಡಿ (ಬೆಳಗಾವಿ) : "ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ವಹಿಸಬೇಕು. ಹಾಗಾದಲ್ಲಿ ಯಾವುದೇ ಗೊಂದಲ ಉಂಟಾಗದೇ ಪ್ರಕರಣ ಸ್ವಚ್ಛವಾಗುತ್ತದೆ" ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
"ರಮೇಶ್ ಜಾರಕಿಹೊಳಿ ಅವರು ಹೇಳಿದ ರೀತಿಯಲ್ಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜಾರಕಿಹೊಳಿ ಅವರನ್ನು ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದಷ್ಟು ಬೇಗ ತನಿಖೆಯಾಗಲಿ" ಎಂದು ಕುಮಟಳ್ಳಿ ಆಗ್ರಹಿಸಿದರು.
'ಚಾಣಕ್ಯ'ನ ಸಭೆ:ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರು ಮೊನ್ನೆಯಷ್ಟೇ ಬೆಳಗಾವಿ ಬಿಜೆಪಿ ನಾಯಕರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದರು. ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೀರಾ? ಎಂದು ಅಮಿತ್ ಶಾ ನಮ್ಮಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಎಲ್ಲಾ ಮುಖಂಡರು ಎದ್ದು ನಿಂತು ಆಂತರಿಕ ಮನಸ್ತಾಪವನ್ನು ಪಕ್ಷದ ವಿಚಾರಕ್ಕೆ ತರದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದೇವೆ. 2023ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಮಾತು ನೀಡಿದ್ದೇವೆ. ಇದನ್ನು ಕೇಳಿದ ಅಮಿತ್ ಶಾ ಸಂತೋಷ ವ್ಯಕ್ತಪಡಿಸಿದ್ದಾರೆ" ಎಂದರು.