ಚಿಕ್ಕೋಡಿ : ಪ್ರವಾಹದ ನೀರಿನಲ್ಲಿ ತಮ್ಮ ಜೀವನದ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಪರಿಹಾರ ನೀಡಿ ಕಾಪಾಡಿ ಎಂದು ಜೈನ ಸಮಾಜದ ರಾಷ್ಟ್ರಸಂತರಾದ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಚಿನ್ಮಯಸಾಗರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ ಹಾಗೂ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಆಚಾರ್ಯ ಶಾಂತಿಸಾಗರ ಜೈನ ಆಶ್ರಮದಲ್ಲಿ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ, ಜೀವನದಲ್ಲಿ ಬದುಕಲು ನೀರು ಅತಿ ಅಮೂಲ್ಯ. ಆದರೆ ಮಹಾಪೂರ ಬಂದು ಸಂಪೂರ್ಣ ಜೀವನ ಅಸ್ತ-ವ್ಯಸ್ತವಾಗಿದೆ. ಇದೇ ನೀರನ್ನು ಬರಡು ಭೂಮಿಗಳಿಗೆ ಬಳಿಸಿ, ಅಲ್ಲಿಯ ರೈತರ ಜೀವನ ಉದ್ಧಾರ ಮಾಡಲು ಸಾಧ್ಯವಿದೆ. ಆದರೆ ಸರಕಾರ ಮನಸ್ಸು ಮಾಡಬೇಕಿದೆ ಎಂದು ಮಹಾರಾಜರು ಹೇಳಿದರು.
ಪ್ರವಾಹದಿಂದ ಜನರು ಮನೆ, ಆಸ್ತಿ, ಬೆಳೆದ ಬೆಳೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಆಶ್ರಯದ ಅವಶ್ಯಕತೆಯಿದೆ. ಸರಕಾರ 10 ಸಾವಿರ ರೂ. ಮಾತ್ರ ಪರಿಹಾರ ನೀಡಿದೆ. ಅವರಿಗೆ ಇಷ್ಟು ಹಣದಿಂದ ಏನಾಗುವುದು? ಸೂರು ಕಳೆದುಕೊಂಡವರಿಗೆ ಮನೆಗಳು ನಿರ್ಮಿಸುವುದು, ಬೆಳೆದ ಬೆಳೆಗೆ ಪರಿಹಾರ ನೀಡುವುದು ಅಗತ್ಯವಿದೆ. ದೇಶ ಮತ್ತು ರಾಜ್ಯದಲ್ಲಿನ ಉದ್ಯಮಿಗಳು, ರಾಜಕೀಯ ಮುಖಂಡರು, ಸಂಘ, ಸಂಸ್ಥೆಗಳು ನೆರವು ನೀಡಲು ಮುಂದೆ ಬರಬೇಕು. ನೆರೆಯಲ್ಲಿ ಹಾನಿಯಾದ ಕುಟುಂಬಗಳಿಗೆ ಮನೆ ಕಟ್ಟಿಸಿ, ಅವರಿಗೆ ನೆಮ್ಮದಿ ನೀಡುವುದು ಅಗತ್ಯವಿದೆ ಎಂದರು.