ಬೆಳಗಾವಿ:ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣವೂ ಜೈನ ಸಮಾಜವನ್ನು ಸಿಡಿದೇಳುವಂತೆ ಮಾಡಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿಯ ಸುವರ್ಣವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜೈನ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.
ಹೌದು.. ಜೈನ ಮುನಿಗಳನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಜೈನ ಸಮುದಾಯದವರ ಆಕ್ರೋಶದ ಕಟ್ಟೆ ಒಡೆದು ಹೋಗಿದೆ. ಈ ಘಟನೆ ಖಂಡಿಸಿ ಜೈನ ಮುನಿಗಳಾದ ಶ್ರೀ ಬಾಲಾಚಾರ್ಯ ಸಿದ್ಧಸೇನ ಮಹಾರಾಜರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಮುಂದೆ ರಾಷ್ಟ್ರೀಯ ಹೆದ್ದಾರಿ ತಡೆದು ಜೈನ ಸಮಾಜದವರು ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಜೈನ ಮುನಿಗಳಾದ ಮುನಿ ಶ್ರೀ ಬಾಲಾಚಾರ್ಯ ಸಿದ್ಧಸೇನ ಮಹಾರಾಜರು, ಜೈನ ಮುನಿಗಳ ಹತ್ಯೆ ಮಾಡಿದ ದಿನ ಜೈನ ಸಮಾಜಕ್ಕೆ ಒಂದು ಕರಾಳ ದಿನ. ನಮ್ಮ ಪ್ರತಿಭಟನೆ ಯಾವುದೇ ಧರ್ಮ, ಜಾತಿ, ಪಕ್ಷ, ಸರ್ಕಾರದ ವಿರುದ್ಧದ ಹೋರಾಟವಲ್ಲ. ನಮ್ಮ ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜೈನ ಸಮಾಜದ ತ್ಯಾಗ ಜೀವಿಗಳು ಮುನಿವರ್ಯರಿಗೆ ಸುರಕ್ಷತೆ ಅಗತ್ಯವಿದೆ. ಇದು ಮುಖ್ಯಮಂತ್ರಿ ಅಷ್ಟೇ ಅಲ್ಲದೇ ಪ್ರಧಾನಮಂತ್ರಿವರೆಗೂ ಮುಟ್ಟಬೇಕು. ಜೈನ ಧರ್ಮ ಅಹಿಂಸೋ ಪರಮೋ ಧರ್ಮ. ಬದುಕು ಮತ್ತು ಬದುಕಲು ಬಿಡು ಎನ್ನುವ ತತ್ವದ ಮೇಲೆ ನಡೆಯುವಂತಹದ್ದು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.