ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದವರಾದ ಆಚಾರ್ಯ ರಾಷ್ಟ್ರಸಂತ ಚಿನ್ಮಯಸಾಗರ(ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಶನಿವಾರ ಜೀವನದ ಅಂತಿಮ ಘಟ್ಟವಾದ ಯಮಸಲ್ಲೇಖನ ವ್ರತ ಸ್ವೀಕರಿಸಿದರು.
ಜೈನ ಸಮಾಜದ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರು ಯಮಸಲ್ಲೇಖನ ವ್ರತ ಸ್ವೀಕಾರ ಮುನಿ ಮಹಾರಾಜರು ವರ್ಷಾಯೋಗ ಚಾತುರ್ಮಾಸ ನಿಮಿತ್ಯ ಹುಟ್ಟೂರ ಜುಗೂಳ ಗ್ರಾಮದಲ್ಲಿ ಆಗಮಿಸಿದ್ದರು. ಕೃಷ್ಣಾ ನದಿಗೆ ಮಹಾಪೂರ ನೀರು ಬಂದಿದ್ದರಿಂದ ಕೆಲ ದಿನ ಸುರಕ್ಷಿತ ಸ್ಥಳಕ್ಕಾಗಿ ಶೇಡಬಾಳದ ಶಾಂತಿಸಾಗರ ಆಶ್ರಮದಲ್ಲಿ ಉಳಿದು ಪ್ರವಚನ ಬೋಧಿಸಿದರು. ಬಳಿಕ ಮರಳಿ ಜುಗೂಳ ಗ್ರಾಮದಲ್ಲಿ ಬಂದು ನಿಯಮಸಲ್ಲೇಖನ ವ್ರತ ಪ್ರಾರಂಭಿಸಿದರು.
ಕಳೆದ ಕೆಲ ದಿನಗಳಿಂದ ಹಂತ ಹಂತವಾಗಿ ಆಹಾರ, ಫಲ ರಸ ತ್ಯಜಿಸಿದ್ದ ಮುನಿಗಳು ಇಂದು ಸಂಪೂರ್ಣವಾಗಿ ನೀರನ್ನೂ ಸಹ ತೇಜಿಸಿ ಯಮಸಲ್ಲೇಖನ ವ್ರತ ಸ್ವೀಕರಿಸಿದರು. ಆಚಾರ್ಯ ಜಿನಸೇನ ಮಹಾರಾಜರು ಮತ್ತು ಇತರ ಮುನಿಗಳು ಅವರಿಗೆ ಯಮಸಲ್ಲೇಖನ ವೃತ ನೀಡಿದರು.
ಜಂಗಲವಾಲೆ ಬಾಬಾ ತಮ್ಮ ಅಂತಿಮ ಸಂದೇಶ ನೀಡುವಾಗ, ನನ್ನ ಜೀವನದಲ್ಲಿ ನನ್ನಿಂದ ಜೈನ ಸಮಾಜದ ಅಹಿಂಸಾ ತತ್ವಗಳ ಸೇವೆ ಮಾಡುತ್ತಾ ಬಂದಿದ್ದೇನೆ. ಈಗ ಕೊನೆ ಘಟ್ಟದ ಯಮಸಲ್ಲೇಖನ ವ್ರತ ಸ್ವೀಕರಿಸಿ ನನ್ನ ಅಂತಿಮ ದಾರಿಗೆ ಸಾಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಎಲ್ಲ ಶ್ರಾವಕ ಶ್ರಾವಿಕೆಯರಿಗೆ ವಿನಂತಿಸಿದರು.