ಬೆಳಗಾವಿ:ಕೈಗಾರಿಕೆ ಆರಂಭಿಸಲು ಅನುಮತಿ ಅಗತ್ಯವಿಲ್ಲ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಉದ್ಯಮಭಾಗದ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶನಿವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ಕೈಗಾರಿಕೆಗಳ ಆರಂಭಕ್ಕೆ ಎಲ್ಲಾ ರೀತಿಯ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ.
ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ವಿಶೇಷ ಪ್ಯಾಕೇಜ್ ಘೋಷಣೆಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾಪ ಕೂಡ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳು ಇದರ ಬಗ್ಗೆ ಘೊಷಣೆ ಮಾಡಬಹುದು. ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.
ಕೋವಿಡ್-19ಅನ್ನು ಸವಾಲಾಗಿ ಸ್ವೀಕರಿಸಿ ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕಿದೆ. ವಿದ್ಯುತ್ ಬಿಲ್ ಭರಿಸಲು ಕಾಲಾವಕಾಶ ನೀಡಲಾಗುತ್ತದೆ ಎಂದು ಸಚಿವ ಶೆಟ್ಟರ್ ಹೇಳಿದರು.
ಲಾಕ್ಡೌನ್ ಯಶಸ್ಸಿಗೆ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಸಾಮಾನ್ಯ ಜನ ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ. ಲಾಕ್ಡೌನ್ ಮುಂದುವರಿಸಿದ್ದರೂ ಹಂತ ಹಂತವಾಗಿ ವಿವಿಧ ಬಗೆಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.