ಬೆಳಗಾವಿ: ನೆರೆಯ ರಾಜ್ಯದಿಂದ ಬೆಳಗಾವಿ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆ ನಡೆಸಿದ ಬಳಿಕ ಅವರನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಬೇಕು. ಈ ಕುರಿತು ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸುವ ಇತರೆ ಜಿಲ್ಲೆಯ ಜನರನ್ನು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳ ಮೂಲಕ ಕಳಿಸಿಕೊಡಬೇಕು. ಬೇರೆ ರಾಜ್ಯಗಳಲ್ಲಿ ಮೃತಪಟ್ಟಿರುವವರನ್ನು ರಾಜ್ಯಕ್ಕೆ ಕರೆತರದೇ ಆಯಾ ರಾಜ್ಯಗಳಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೂ ಕೂಡ ಸುದೈವದಿಂದ ಜೀವಹಾನಿ ಪ್ರಮಾಣ ಕಡಿಮೆಯಾಗಿದೆ. ಇದುವರೆಗೆ ವೆಂಟಿಲೇಟರ್ ಬಳಕೆ ಹಂತಕ್ಕೆ ಪರಿಸ್ಥಿತಿ ತಲುಪಿಲ್ಲ. ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ನೆಗೆಟಿವ್ ಬಂದ ಬಳಿಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಅವರನ್ನು ಮನೆಗೆ ಕಳಿಸಬೇಕು ಎಂದರು.
ಎರಡು ತಿಂಗಳಿನ ವಿದ್ಯುಚ್ಛಕ್ತಿ ಬಿಲ್ ಒಮ್ಮೆಲೆ ನೀಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಪರಿಶೀಲಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಹೆಸ್ಕಾಂ ಹಿರಿಯ ಅಧಿಕಾರಿಗಳ ಜತೆ ಸಭೆಯ ಮದ್ಯದಲ್ಲಿಯೇ ದೂರವಾಣಿಯ ಮೂಲಕ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಂತುಗಳಲ್ಲಿ ಬಿಲ್ ಪಾವತಿಸಲು ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.