ಅಥಣಿ :ಸದ್ಯ ವಲಸಿಗ ಶಾಸಕರ ಸ್ಥಿತಿ ಸರಿಯಿಲ್ಲ. ಅವರಿಗೆ ಈಗ ಸಚಿವ ಸ್ಥಾನವನ್ನು ತಪ್ಪಿಸಲಾಗಿದೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವುದು ಅನುಮಾನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಥಣಿ ಪಟ್ಟಣದಲ್ಲಿ ಪಕ್ಷದ ನೂತನ ಕಾರ್ಯಾಲಯ ಉದ್ಘಾಟನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ತೊರೆದು ಬಿಜೆಪಿಗೆ ಸೇರಿದ 17 ಜನ ಶಾಸಕರು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಕೆಲವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಮುಂಬರುವ ದಿನದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವುದು ಕೂಡ ಅನುಮಾನ ಎಂದು ವಲಸಿಗ ಬಿಜೆಪಿ ಶಾಸಕರಿಗೆ ಟಾಂಗ್ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನಸಾಮಾನ್ಯರಿಗೆ ಅಲ್ಲವೆಂದು ಸಾಬೀತಾಗಿದೆ. ಸದ್ಯ ತೈಲಬೆಲೆ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಹಾಗೂ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಮುಂಬರುವ ದಿನದಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನೆಹರು ಹುಕ್ಕಾ ಬಾರ್, ಸಿಟಿ ರವಿ ಹೇಳಿಕೆ ವಿಚಾರ :ನಮ್ಮದು ಶಿಸ್ತಿನ ಪಕ್ಷವೆಂದು ಬಿಜೆಪಿಗರು ಹೇಳುತ್ತಾ ತಿರುಗಾಡುತ್ತಾರೆ. ಸಿ ಟಿ ರವಿ ಮನಬಂದಂತೆ ಮಾತನಾಡುತ್ತಾರೆ. ಆತ ಸಂಸ್ಕೃತಿ ಗೊತ್ತಿಲ್ಲದ ವ್ಯಕ್ತಿ. ಉನ್ನತ ಸ್ಥಾನದಲ್ಲಿದ್ದಾರೆ. ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು ಎಂದು ಸಿ ಟಿ ರವಿ ವಿರುದ್ಧ ಹರಿಹಾಯ್ದರು.
ಸಚಿವೆ ಜೊಲ್ಲೆ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ :ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿದ್ದಾಗ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಎಸಗಿರುವುದು ಎಲ್ಲರಿಗೂ ಗೊತ್ತಿದೆ. ಈ ಕುರಿತಂತೆ ಸಂಪೂರ್ಣ ತನಿಖೆ ಆಗಬೇಕು. ನಂತರ ಅವರು ಸಚಿವ ಸ್ಥಾನವನ್ನು ಅಲಂಕರಿಸಬೇಕು. ಸಚಿವೆ ಜೊಲ್ಲೆ ಎಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮುಂದುವರೆಸಲಾಗುವುದು ಎಂದರು.
ಓದಿ: 'ನನಗಿಷ್ಟವಾದ ಮುಜರಾಯಿ ಖಾತೆಯನ್ನೇ ನೀಡಿದ್ದಾರೆ, ಯಾವುದೇ ಅಸಮಾಧಾನವಿಲ್ಲ'