ಬೆಳಗಾವಿ :ರೈತರ ಅನುಕೂಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಮಸೂದೆಗಳಲ್ಲಿ ತಪ್ಪಿದ್ರೆ ಎತ್ತಿ ತೋರಿಸಿದ್ರೆ ಸರಿಪಡಿಸುತ್ತೇವೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈತರಲ್ಲಿ ಮನವಿ ಭಾರತ್ ಬಂದ್ ಮಾಡಬೇಡಿ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈತರಲ್ಲಿ ಮನವಿ ಮಾಡಿದ್ದಾರೆ. ಬೆಳಗಾವಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಬದ್ಧತೆಯಿಂದ ನಡೆಯುತ್ತಿದೆ. ನರೇಂದ್ರ ಮೋದಿ ಸರ್ಕಾರ ರೈತರಿಗೆ ಕೊಟ್ಟ ವಚನಗಳನ್ನು ಜಾರಿಗೆ ತರುತ್ತಿದೆ.
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಆದಾಯ ಹೆಚ್ಚಿಸಲೆಂದೇ ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆ ಜಾರಿಗೆ ತಂದಿದೆ. ಈ ಮೂರು ಮಸೂದೆಗಳಲ್ಲಿ ಏನಾದರೂ ತಪ್ಪಿದ್ರೆ ಎತ್ತಿ ತೋರಿಸಿ. ಅವುಗಳನ್ನು ಸರಿಪಡಿಸಲು ಸರ್ಕಾರ ಬದ್ಧವಿದೆ. ವಿರೋಧ ಪಕ್ಷಗಳ ಮಾತು ಕೇಳಿ ಭಾರತ್ ಬಂದ್ ಮಾಡಬೇಡಿ. ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಉತ್ತರ ಭಾರತದ ಕೆಲವೇ ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿನ ಜನ ಸ್ವಹಿತಾಸಕ್ತಿಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತಪರವಾಗಿರುವ ಈ ಮಸೂದೆಗಳನ್ನು ಅಧ್ಯಯನ ಮಾಡಿ, ತಪ್ಪಿದ್ರೆ ಸರ್ಕಾರದ ಗಮನಕ್ಕೆ ತೆಗೆದುಕೊಂಡು ಬನ್ನಿ, ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.