ಕರ್ನಾಟಕ

karnataka

ETV Bharat / state

World Yoga Day: ಗುರುವಿಲ್ಲದೇ ಯೋಗ ಕಲಿತ ಆಧುನಿಕ ಏಕಲವ್ಯ ಯುವಕ.. 85ಕ್ಕೂ‌ ಅಧಿಕ ಆಸನಗಳು ಸುಲಲಿತ

ವಿಶ್ವ ಯೋಗ ದಿನದ ವಿಶೇಷತೆ - ಗುರುವಿಲ್ಲದೇ ಯೋಗ ಕಲಿತ 'ಬುಡನ್ ಮಲ್ಲಿಕ್ ಹೊಸಮನಿ' - 85ಕ್ಕೂ‌ ಅಧಿಕ ಆಸನಗಳನ್ನು ನಿರರ್ಗಳವಾಗಿ ಮಾಡಿ ತೋರಿಸುವ ಮೂಲಕ ಸಾಧನೆ

Budan Budan Malik Hosamani
ಆಧುನಿಕ ಏಕಲವ್ಯ 'ಬುಡನ್ ಮಲ್ಲಿಕ್ ಹೊಸಮನಿ'

By

Published : Jun 21, 2023, 11:08 AM IST

Updated : Jun 21, 2023, 11:39 AM IST

ಗುರುವಿಲ್ಲದೇ ಯೋಗ ಕಲಿತ ಆಧುನಿಕ ಏಕಲವ್ಯ 'ಬುಡನ್ ಬುಡನ್ ಮಲ್ಲಿಕ್ ಹೊಸಮನಿ' ...

ಬೆಳಗಾವಿ:ಇಂದು ವಿಶ್ವ ಯೋಗ ದಿನ. ಈ ದಿನ ಓರ್ವ ಅಪರೂಪದ ಯೋಗ ಸಾಧಕನನ್ನು 'ಈಟಿವಿ ಭಾರತ' ಪರಿಚಯಿಸುತ್ತಿದೆ. ಈ ಯೋಗಪಟು ಪಕ್ಕಾ ಹಳ್ಳಿ ಹೈದ. ಇವರು 85ಕ್ಕೂ‌ ಅಧಿಕ ಆಸನಗಳನ್ನು ಹಾಕುವ ಮೂಲಕ ಯೋಗದಲ್ಲಿ ಸಾಧನೆ ಮೆರೆಯುತ್ತಿದ್ದಾರೆ.

ಯೋಗಕ್ಕೆ ಯಾವುದೇ ಜಾತಿ – ಧರ್ಮದ ಬಂಧನವಿಲ್ಲ. ಸತತ ಪರಿಶ್ರಮ, ತಾಳ್ಮೆ, ಆಸಕ್ತಿ ಮತ್ತು ಶ್ರದ್ಧೆಯಿದ್ದರೆ ಸಾಕು. ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬುಡನ್ ಮಲ್ಲಿಕ್ ಹೊಸಮನಿ (31) ಅವರು ಯಾವುದೇ ಗುರುವಿನ ಸಹಾಯ ಇಲ್ಲದೇ ಸ್ವಯಂ ಯೋಗ ಕಲಿತ ಆಧುನಿಕ ಏಕಲವ್ಯ ಎನಿಸಿದ್ದಾರೆ.

ಆಧುನಿಕ ಏಕಲವ್ಯ 'ಬುಡನ್ ಮಲ್ಲಿಕ್ ಹೊಸಮನಿ'

85ಕ್ಕೂ ಅಧಿಕ ಯೋಗಾಸನ ಕರಗತ:ವೃತ್ತಿಯಿಂದ ಕಟ್ಟಡ ಕಾರ್ಮಿಕರಾಗಿರುವ ಬುಡನ್ ಅವರು, ಯೋಗದ ಪಟ್ಟುಗಳನ್ನು ಕರಗತ ಮಾಡಿಕೊಂಡು ಏಳುಕೊಳ್ಳದ ಯಲ್ಲಮ್ಮನ ನಾಡಿನಲ್ಲಿ ಯೋಗದಲ್ಲಿ ತ್ರಿವಿಕ್ರಮನಾಗಿ ಹೊರ ಹೊಮ್ಮಿದ್ದಾರೆ. ಕಟ್ಟು ಮಸ್ತಾದ ಮೈಕಟ್ಟು ಹೊಂದಿರುವ ಬುಡನ್‌ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 85ಕ್ಕೂ ಅಧಿಕ ಯೋಗಾಸನಗಳನ್ನು ನಿರರ್ಗಳವಾಗಿ ಮಾಡುತ್ತಾರೆ.

'ಬುಡನ್ ಮಲ್ಲಿಕ್ ಹೊಸಮನಿ'

ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ಗಿರಗಿರನೆ ತಿರುಗಿಸುವ ಪರಿ ಎಂಥವರನ್ನೂ ಬೆರಗುಗೊಳಿಸುತ್ತದೆ. ಇನ್ನು ಇವರು ಹಾಕುವ ವಜ್ರಾಸನ, ಶೀರ್ಷಾಸನ, ಅರ್ಧಕಟಿ ಚಕ್ರಾಸನ, ಪದ್ಮಾಸನ, ಪದ್ಮಭಕಾಸನ, ಮಯೂರಾಸನ, ಬದ್ಧಕೋನಾಸನ, ಶವಾಸನ, ಬಕಾಸನ, ಚಂದ್ರಾಸನದ ಭಂಗಿಗಳ‌ನ್ನು ನೋಡಿದರೆ ಎಂಥವರಿಗಾದರೂ ಯೋಗ ಮಾಡುವಂತೆ ಪ್ರೇರೇಪಿಸುತ್ತದೆ.

'ಬುಡನ್ ಮಲ್ಲಿಕ್ ಹೊಸಮನಿ'

ಕಾಯಕ ಬಿಡದ ಬುಡನ್:ಯೋಗದಲ್ಲಿ ಇಷ್ಟೆಲ್ಲ ಪ್ರಾವಿಣ್ಯತೆ ಹೊಂದಿದರೂ ಬುಡನ್ ಅವರು ತಾವು ಮಾಡುತ್ತಿದ್ದ ಕಟ್ಟಡ ಕಾರ್ಮಿಕ ಕೆಲಸ ಮಾತ್ರ ಬಿಟ್ಟಿಲ್ಲ. ಬೆಳಗ್ಗೆ ಯೋಗ‌ ಮಾಡುವ ಅವರು ತಮ್ಮೂರಿನಿಂದ ಸವದತ್ತಿ, ಯಲ್ಲಮ್ಮನಗುಡ್ಡ ಮತ್ತಿತರ ಕಡೆ ನಿತ್ಯ ಕೆಲಸಕ್ಕೆ ಹೋಗುತ್ತಾರೆ. ಇದರಿಂದ ನಿತ್ಯ ಬರುವ 500 ರೂ. ಆದಾಯದಲ್ಲೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಟಿವಿಯಲ್ಲಿ ನೋಡಿ ಯೋಗ ಕಲಿತ ಬುಡನ್: ನನಗೆ ಯೋಗದ ಬಗ್ಗೆ ಎಳ್ಳಷ್ಟು ಗೊತ್ತಿರಲಿಲ್ಲ. 13 ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಯೋಗ ಕಾರ್ಯಕ್ರಮ ನನಗೆ ಯೋಗದ ಹುಚ್ಚು ಹಿಡಿಸಿತು. ನನ್ನಲ್ಲಿ ಉತ್ಸಾಹ ತುಂಬಿತು. ಆದರೆ, ನನಗೆ ಯೋಗ ಕಲಿಸಿ ಕೊಡಲು ಯಾರೂ ಇರಲಿಲ್ಲ. ಹೀಗೆ ನಮ್ಮ ಮನೆಯಲ್ಲೆ ಒಂದೊಂದೇ ಯೋಗಾಸನ ಕಲಿಯಲು ಆರಂಭಿಸಿದೆ. ಈಗ ನಿತ್ಯ ಬೆಳಗ್ಗೆ ಮತ್ತು ಸಂಜೆ ಸೇರಿ 85ಕ್ಕೂ ಅಧಿಕ ಆಸನಗಳನ್ನು ಹಾಕುತ್ತೇನೆ. ಯೋಗದಿಂದಲೇ ಸಮಾಜದಲ್ಲಿ ಜನರು ನನ್ನ ಗುರುತಿಸಿ ಗೌರವಿಸುವಂತೆ ಆಗಿದೆ. ಎಲ್ಲರೂ ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯದಿಂದ ಇರಬಹುದು ಎಂದು ಸಲಹೆ ನೀಡಿದರು.

ರಾಮದೇವ ಕರೆದರೂ ತವರು ಬಿಡದ ಬುಡನ್:ಯೋಗ ಗುರು ಬಾಬಾ ರಾಮದೇವ ಅವರು ಕರೆದರೂ ಸ್ವಗ್ರಾಮ ಬಿಟ್ಟು ಹೋಗದ ಬುಡನ್ ಅವರ ತವರಿನ ಮೇಲಿನ ಪ್ರೀತಿ, ಅಭಿಮಾನ ಮೆಚ್ಚಲೇಬೇಕು. ಇವರ ಯೋಗ ಸಾಧನೆ‌ ಗುರುತಿಸಿ ತಮ್ಮ ಬಳಿ ಹರಿದ್ವಾರಕ್ಕೆ ಬರುವಂತೆ ರಾಮದೇವ ಆಹ್ವಾನಿಸಿದ್ದರಂತೆ. ಆದರೆ, ಆರ್ಥಿಕ ಸಂಕಷ್ಟದಿಂದ ಹೋಗಲು ಆಗಿರಲಿಲ್ಲ. ಯಾವುದಾದರೂ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡಿದರೆ ಸಾಕು ಹುಟ್ಟಿದ ಮನೆ, ಹಳ್ಳಿ ಬಿಟ್ಟು ಪಟ್ಟಣ ಸೇರುವವರ ಮಧ್ಯ ಬುಡನ್ ಹಳ್ಳಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಬಳಿ ಯೋಗ ಕಲಿಯಲು ಬರುವವರಿಗೆ ಉಚಿತವಾಗಿ ಯೋಗ ಕಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

"ನಮ್ಮೂರಿನ ಯುವಕ ಬುಡನ್ ಯೋಗದಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ನಾನಾ ರೀತಿಯ ತಪ್ಪಲುಗಳನ್ನು ತಿನ್ನುವ ಈತನ ಶರೀರ ಸದೃಢವಾಗಿದೆ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲಿ. ದೇವರು ಬುಡನ್ ಅವರಿಗೆ ಒಳ್ಳೆಯದು ಮಾಡಲಿ"-ಕ್ರೀಡಾಪಟು ರಾಜು ಪಾಟೀಲ

ಯೋಗದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದರೂ ಬುಡನ್ ಅವರನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡದಿರುವುದು ನಿಜಕ್ಕೂ ಖೇದಕರ ಸಂಗತಿ. ಇನ್ನಾದರೂ ಸಂಬಂಧಿಸಿದವರು ಇವರನ್ನು ಗುರುತಿಸುವ ಕೆಲಸ ಮಾಡಲಿ ಎಂಬುದೇ ನಮ್ಮ ಆಶಯ.

ಇದನ್ನೂ ಓದಿ:ವಿಧಾನಸೌಧದ ಮುಂಭಾಗ ಯೋಗ ಪ್ರದರ್ಶನ, ರಾಜ್ಯಪಾಲರಿಂದ ಚಾಲನೆ

Last Updated : Jun 21, 2023, 11:39 AM IST

ABOUT THE AUTHOR

...view details