ಅಂತಾರಾಷ್ಟ್ರೀಯ ಮಹಿಳಾ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಟೂರ್ನಿ: ಭಾರತ ತಂಡಕ್ಕೆ ಬೆಳಗಾವಿಯ ನಾಲ್ವರು ಆಯ್ಕೆ ಬೆಳಗಾವಿ :ಥೈಲ್ಯಾಂಡ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಬೆಳಗಾವಿ ಜಿಲ್ಲೆಯ ನಾಲ್ವರು ಆಯ್ಕೆಯಾಗಿದ್ದಾರೆ. ಯರಗಟ್ಟಿ ತಾಲ್ಲೂಕಿನ ತಾವಲಗೇರಿ (ಕುರುಬಗಟ್ಟಿ) ಗ್ರಾಮದ ಮಾಯವ್ವ ಮಹಾದೇವಪ್ಪ ಸಣ್ಣನಿಂಗನವರ, ಯರಗಟ್ಟಿ ತಾಲೂಕಿನ ಆಲದಕಟ್ಟಿ(ಕೆ.ಎಂ) ಲಕ್ಷ್ಮೀ ರಾಯಪ್ಪ ರಾಯಣ್ಣವರ, ಬೆಳಗಾವಿಯ ಅನಗೋಳದ ಆರತಿ ಸುರೇಶ್ ಪವಾರ, ಖಾನಾಪುರ ತಾಲೂಕಿನ ಬೈಲೂರದ ಲಲಿತಾ ಶಂಕರ ಗವಾಸ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಜನವರಿ 9ರಿಂದ 21ರವರೆಗೆ ಥೈಲ್ಯಾಂಡ್ನ ಬ್ಯಾಂಕಾಕ್‌ನಲ್ಲಿ ಏಷ್ಯಾ ಓಷಿಯಾನಿಯಾ ಝೋನ್ (ಏಓಝಡ್) ಅಂತಾರಾಷ್ಟ್ರೀಯ ಮಹಿಳಾ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಲು ಬೆಳಗಾವಿ ಜಿಲ್ಲೆಯ ನಾಲ್ವರು ಆಯ್ಕೆಯಾಗಿದ್ದಾರೆ. ಈ ನಾಲ್ವರು ಕ್ರೀಡಾಪಟಿಗಳು ಬೆಳಗಾವಿಯ ವಿಶ್ವಾಸ ಫೌಂಡೇಶನ್ ತರಬೇತುದಾರ ಬಸವರಾಜ ಸುಣಧೋಳಿ ಅವರ ಬಳಿ ಕಳೆದ ಮೂರು ವರ್ಷಗಳಿಂದ ಪ್ಯಾರಾ ಟೇಬಲ್ ಟೆನಿಸ್ ಹಾಗೂ ವಿ.ಎಸ್ ಪಾಟೀಲ್ ಅವರಿಂದ ವ್ಹೀಲ್‌ಚೇರ್ ಬಾಸ್ಕೆಟ್ ಬಾಲ್ ತರಬೇತಿಯನ್ನು ಪಡೆಯುತ್ತಿದ್ದಾರೆ.
ಕಳೆದ ನವೆಂಬರ್ನಲ್ಲಿ ಛತ್ತೀಸ್ಗಡದ ರಾಜನಂದಗಾಂವ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಈ ನಾಲ್ವರೂ ಕ್ರೀಡಾಪಟುಗಳು ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದರು. ಜೊತೆಗೆ ಅಂತಾರಾಷ್ಟ್ರೀಯ ಪಂದ್ಯಾವಳಿಗೂ ಆಯ್ಕೆಯಾಗಿದ್ದರು.
ಮಾಯವ್ವ ಕಳೆದ ಡಿಸೆಂಬರ್ನಲ್ಲಿ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ ಖೇಲೊ ಇಂಡಿಯಾ ಪ್ಯಾರಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಯವ್ವ, ಒಲಿಂಪಿಕ್ನಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಆರು ಪದಕಗಳನ್ನು ಗೆದ್ದಿದ್ದೇನೆ. ತಂದೆ ತಾಯಿ ಕೂಲಿ ನಾಲಿ ಮಾಡಿಕೊಂಡು ನಮ್ಮನ್ನು ಸಾಕಿದ್ದಾರೆ. ನನಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದು, ಮುಂದೆ ಕಾಮನ್ವೆಲ್ತ್ ಮತ್ತು ಒಲಿಂಪಿಕ್ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಮಾಯವ್ವ ತಾಯಿ ಭಾಗವ್ವ ಮಾತನಾಡಿ, ನಾವು ಇಲ್ಲೇ ಇರುವ ಯರಗಟ್ಟಿ, ಬೆಳಗಾವಿಗೂ ಕೂಡ ಹೋಗಿಲ್ಲ. ಆದರೆ ನಮ್ಮ ಮಗಳು ವಿದೇಶಕ್ಕೆ ದೊಡ್ಡ ಸಾಧನೆ ಮಾಡಲು ಹೊರಟಿದ್ದಾಳೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ದೇವರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.
ಲಕ್ಷ್ಮೀ ರಾಯನ್ನವರ ಮಾತನಾಡಿ, ಇದೇ ಮೊದಲ ಬಾರಿಗೆ ನಾನು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಕಳೆದ ಬಾರಿ ಜಿಲ್ಲೆಯಿಂದ ಮಾಯವ್ವ ಮತ್ತು ಲಲಿತಾ ಆಯ್ಕೆಯಾಗಿದ್ದರು. ಆಗ ಬೆಳ್ಳಿ ಪದಕ ಗೆದ್ದಿದ್ದರು. ಈ ಸಲ ಚಾಂಪಿಯನ್ ಆಗಿ ಚಿನ್ನದ ಪದಕದೊಂದಿಗೆ ದೇಶಕ್ಕೆ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ನಾಲ್ವರು ಬೆಳಗಾವಿಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ಭಾರತ ತಂಡದೊಂದಿಗೆ ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ :ಟೆಸ್ಟ್, ಟಿ20 ಕ್ರಿಕೆಟ್ನಲ್ಲಿ ಭಾರತದ ಕೆಲ ಆಟಗಾರರು ಓವರ್ ರೇಟೆಡ್: ಶ್ರೀಕಾಂತ್