ಬೆಳಗಾವಿ :ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ದಿಗ್ವಿಜಯ ಸಾಧಿಸಲಿ ಎಂದು ಬೆಳಗಾವಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಗಣಪತಿ ಮಂದಿರದಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕಳೆದ 31 ವರ್ಷಗಳಲ್ಲಿ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ- ಪಾಕಿಸ್ತಾನ ಏಳು ಬಾರಿ ಮುಖಾಮುಖಿಯಾಗಿದೆ. ಏಳು ಪಂದ್ಯಗಳಲ್ಲೂ ಭಾರತವೇ ಗೆಲುವು ಸಾಧಿಸಿದೆ. ಹಾಗಾಗಿ, 8ನೇ ಬಾರಿಯೂ ಭಾರತ ತಂಡ ಗೆಲ್ಲಲಿ ಎಂದು ಬೇಡಿಕೊಂಡರು.
ಈ ವೇಳೆ ಮಾತನಾಡಿದ ಕ್ರೀಡಾ ಅಭಿಮಾನಿ ಮಹಾಂತೇಶ ವಕ್ಕುಂದ, 2023ರ ವಿಶ್ವಕಪ್ ಟೂರ್ನಿಯ ರೋಚಕ ಪಂದ್ಯ ಇದಾಗಿದೆ. ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣ ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಡೀ ದೇಶವೇ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ನಿಂತಿದೆ. ಈ ಹಿಂದಿನ ವಿಶ್ವಕಪ್ಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಇತಿಹಾಸ ಇಲ್ಲ. ಹಾಗಾಗಿ, ಈ ಬಾರಿಯೂ ಭಾರತ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ವಿಶ್ವಕಪ್ ಗೆಲ್ಲುತ್ತದೆ ಇಲ್ಲವೋ ಅದು ಬೇರೆ ವಿಚಾರ ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ನಮ್ಮ ಭಾರತ ತಂಡ ಗೆಲ್ಲಬೇಕು ಎಂದು ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸಂಬಂಧ ಬೆಳಗಾವಿಯಲ್ಲಿ ಅಭಿಮಾನಿಗಳು ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದರು.