ಬೆಳಗಾವಿ : ಶಿಕ್ಷಣ, ಅರಣ್ಯ, ಪರಿಸರ ಮತ್ತು ಕ್ರೀಡೆಯಲ್ಲಿ ಟಾಪ್ ಇದ್ದರೆ ದೇಶವೂ ಟಾಪ್ ಇರುತ್ತದೆ. ಆದರೆ, ಇವುಗಳನ್ನು ಬಹಳ ಕಡಿಮೆ ಸ್ಥರದಲ್ಲಿ ಇಟ್ಟಿದ್ದೇವೆ. ಹಾಗಾಗಿ ಈ ನಾಲ್ಕು ಕ್ಷೇತ್ರಗಳಲ್ಲಿ ಭಾರತ ಅಗ್ರಸ್ಥಾನಕ್ಕೆ ಏರುವ ಅವಶ್ಯಕತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು. ತಮ್ಮ ಬಳಿ ಕಲಿತ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಉನ್ನತ ಸ್ಥಾನ ಪಡೆದಿದ್ದಾರೆ, ಎಂಬ ಬಗ್ಗೆ ಶಿಕ್ಷಕರು ಇಂದಿನ ಮಕ್ಕಳಿಗೆ ತಿಳಿಸಬೇಕು. ಇದರಿಂದ ಅವರೂ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ನಮಗೆ ಇತಿಹಾಸದ ಬಗ್ಗೆ ಪ್ರಜ್ಞೆ ಇರಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್, ಶಾಹು ಮಹಾರಾಜರು, ಸಾವಿತ್ರಿ - ಜ್ಯೋತಿಬಾ ಫುಲೆ ದಂಪತಿಗಳು ಸೇರಿ ಮತ್ತಿತರ ಮಹನೀಯರ ಕೊಡುಗೆಗಳನ್ನು ಸ್ಮರಿಸಬೇಕು. ಅವರ ಹೋರಾಟದ ಹಾದಿಯನ್ನು ಮಕ್ಕಳಿಗೂ ತಿಳಿಸಿಕೊಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿನ ಕಾಲುಸಂಕಗಳು ಹಾಳಾಗಿ, ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 35 ಕೋಟಿ ಅನುದಾನದಲ್ಲಿ 350 ಕಡೆ ಚಿಕ್ಕಸೇತುವೆ ನಿರ್ಮಿಸುತ್ತಿದ್ದೇವೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಬೇರೆ ದೇಶಗಳಲ್ಲಿ ಶಿಕ್ಷಣ ನೀಡಬೇಕು ಎನ್ನುವ ಏಕೈಕ ಉದ್ದೇಶಿಂದಲೇ ಶಾಲೆಗಳನ್ನು ತೆರೆಯಲಾಗುತ್ತದೆ. ಆದರೆ, ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಾಲೆಗಳನ್ನು ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲವೆಡೆ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳ ಜತೆಗೆ, ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಬಗ್ಗೆಯೂ ವಿಸ್ತೃತವಾಗಿ ಚರ್ಚೆ ಆಗಬೇಕು ಎಂದು ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ಇಂದು ದೆಹಲಿ ಸರ್ಕಾರಿ ಶಾಲೆಗಳು ದೇಶದಲ್ಲೇ ಮಾದರಿಯಾಗಿವೆ. ಆದರೆ, ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಖಾಸಗಿ ಶಾಲೆ ಮಕ್ಕಳೊಂದಿಗೆ ಪೈಪೋಟಿ ನಡೆಸಲು ಆಗುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಶಿಕ್ಷಕರು ಗಮನ ಹರಿಸಬೇಕು. ಹಲವು ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ನಡೆಯಬೇಕು. ಸಕಾಲಕ್ಕೆ ಅತಿಥಿ ಶಿಕ್ಷಕರ ನೇಮಕಾತಿ ಆಗಬೇಕು. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.