ಅಥಣಿ(ಬೆಳಗಾವಿ):ಭಾರತ ಸ್ವಾತಂತ್ರ್ಯ ಅಮೃತ ಅಮೋತ್ಸವ ಸಂಭ್ರಮದಲ್ಲಿದೆ. ದೇಶಕ್ಕಾಗಿ ಜೀವನ ಮುಡಿಪಿಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ 99 ವರ್ಷದ ಧನವಂತ ಹಳಿಂಗಳಿ ಅಂದಿನ ಸಂಗ್ರಾಮದ ಕ್ಷಣಗಳನ್ನು ನೆನೆಸಿಕೊಂಡಿದ್ದಾರೆ.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ 1923ರಲ್ಲಿ ಜನಿಸಿದ ಇವರು, 14ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ. ಇಂಚಿಗೇರಿಯ ಸಾಂಪ್ರದಾಯಿಕ ಗುರುಗಳಾದ ಪ್ರಭು ಮಾಧವಾನಂದರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದೆರು. ಕಂಪನಿ ಸರ್ಕಾರದ ಹಲವಾರು ಕಚೇರಿಗಳನ್ನು ಧ್ವಂಸ ಮಾಡಿ, ಬ್ರಿಟಿಷ್ ಅಧಿಕಾರಿಯನ್ನು ಬೇಟೆಯಾಡಿದ್ದರು. ಹೀಗಾಗಿ ಜಮಖಂಡಿ ಸಾವಳಗಿ ಮತ್ತು ಕೇಂದ್ರ ಜೈಲುವಾಸ ಅನುಭವಿಸಿದ್ದರು.
ಅಂದಿನ ಬ್ರಿಟಿಷ್ ಸರ್ಕಾರದ ತೆರಿಗೆ ನೀತಿ, ಜನ ವಿರೋಧಿ ಕಾರ್ಯಗಳನ್ನು ವಿರೋಧಿಸಿ ಯುವಕರ ಸಂಘಟನೆ ಮಾಡಿಕೊಂಡು ಅವರ ವಿರುದ್ಧ ಹೋರಾಟಕ್ಕೆ ಇಳಿದೆವು. ಹೋರಾಟದಲ್ಲಿ ಮುಂದುವರೆಯುತ್ತ ಬಾಂಬೆ ಸತ್ಯಾಗ್ರಹದಲ್ಲಿ ಗಾಂಧೀಜಿಯವರನ್ನು ನಾನು ಒಮ್ಮೆ ದೂರದಿಂದ ನೋಡಿದೆ. ಗಾಂಧೀಜಿ ಅವರು ಭಾಷಣದಲ್ಲಿ ಹೇಳಿದ ಮಾತನ್ನು ನಾನು ಇಂದಿಗೂ ನೆನಪಿಟ್ಟುಕೊಂಡಿದ್ದೇನೆ. ದೇವರು ಸತ್ಯವಲ್ಲ, ಸತ್ಯವೇ ದೇವರು ಎಂದು ಗಾಂಧೀಜಿ ಹೇಳಿದ್ದರೆಂದು ತಿಳಿಸಿದರು.