ಅಥಣಿ(ಬೆಳಗಾವಿ):ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಾಗೂ ನೆರೆ ರಾಜ್ಯದ ಜಲಾಶಯಗಳಿಂದ ವಾಡಿಕೆಯಂತೆ ನದಿಗೆ ನೀರು ಹರಿ ಬಿಡುವ ಹಿನ್ನೆಲೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇದರಿಂದಾಗಿ ಅಥಣಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಕ್ಕದ ಮಹಾರಾಷ್ಟ್ರ ರಾಜ್ಯದ ರಾಜಾಪುರ ಬ್ಯಾರೇಜ್ನಿಂದ 1.3 ಲಕ್ಷ ಕ್ಯೂಸೆಕ್ ನೀರು ಹಿಪ್ಪರಗಿ ಅಣೆಕಟ್ಟಿಗೆ ಹರಿದು ಬರುತ್ತಿರುವ ಕಾರಣ, ಅಷ್ಟೇ ಪ್ರಮಾಣದ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿಯ ಬಿಡಲಾಗಿದೆ. ಸದ್ಯದ ಮಟ್ಟಿಗೆ ನದಿ ಒಡಲಿನಲ್ಲಿ ಹರಿಯುತ್ತಿದ್ದರೂ ಪ್ರತಿ ವರ್ಷದಂತೆ ಕೃಷ್ಣಾ ನದಿ ಪ್ರವಾಹದಿಂದ ರೈತರು ಈ ಬಾರಿಯೂ ಆತಂಕಕ್ಕೆ ಒಳಗಾಗಿದ್ದಾರೆ.
ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಳ - ನದಿ ತೀರದ ರೈತರಲ್ಲಿ ಆತಂಕ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗುತ್ತಿದ್ದಂತೆ ಅಥಣಿ ತಾಲೂಕಿನ ಜನವಾಡ ಹಾಗೂ ಸವದಿ ಗ್ರಾಮಗಳ ನದಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಮಣ್ಣು ಸವಕಳಿ(ಕೊರೆತ) ಪ್ರಾರಂಭವಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಕಳೆದ ಎರಡು ದಿನಗಳಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ಹಲವು ರೈತರ ನೀರಾವರಿ ಮೋಟಾರ್ಗಳು ಮುಳುಗಿ ರೈತರಿಗೆ ನಷ್ಟ ಸಂಭವಿಸಿದೆ. ಹಾಗೂ ಕೆಲವು ಕಬ್ಬಿನ ಗದ್ದೆಗಳಿಗೆ ನದಿ ನೀರು ಹೊಕ್ಕಿದ್ದು ಮತ್ತೆ ಅಥಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಇದನ್ನೂ ಓದಿ:ಮೈಸೂರು ಹೊರತುಪಡಿಸಿ 16 ಜಿಲ್ಲೆಗಳಲ್ಲಿ Unlock: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?
ಹಲವಾರು ವರ್ಷಗಳಿಂದ ಕೃಷ್ಣ ನದಿ ಪ್ರವಾಹ ಹಾಗೂ ಬೇಸಿಗೆ ಸಂದರ್ಭದಲ್ಲಿ ನೀರು ಬತ್ತಿ ರೈತರಿಗೆ ತೊಂದರೆ ಉಂಟಾಗುತ್ತಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಅಥಣಿ ತಾಲೂಕಿನಲ್ಲಿ ಕೆಲವು ಕಡೆ ನೀರಿನ ರಭಸಕ್ಕೆ ಜಮೀನು ಕೊರೆತ ಆಗುತ್ತಿರುವುದರಿಂದ ಹಿಪ್ಪರಗಿ ಅಣೆಕಟ್ಟು ಕೆಳಭಾಗದ ನದಿ ಪಕ್ಕದಲ್ಲಿ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದರು. ಹಾಗೂ ಅಣೆಕಟ್ಟಿನಿಂದ ಯಾವ ಪ್ರಮಾಣದಲ್ಲಿ ನೀರು ಬಿಡುಗಡೆ ಆಗುತ್ತಿದೆ ಎಂಬುದು ಪ್ರತಿ ಗ್ರಾಮ ಪಂಚಾಯತ್ಗಳಿಗೆ ಮಾಹಿತಿ ನೀಡಿದರೆ ನಮ್ಮ ಕೃಷಿ ಪಂಪ್ಸೆಟ್ ಸುರಕ್ಷಿತವಾಗಿ ರಕ್ಷಿಸಿಕೊಳ್ಳಬಹುದು. ಅಣೆಕಟ್ಟು ಅಧಿಕಾರಿಗಳು ಯಾವ ಪ್ರಮಾಣದ ನದಿಗೆ ನೀರು ಬರುತ್ತಿದೆ ಎಂಬುದರ ಬಗ್ಗೆ ಗ್ರಾಮ ಪಂಚಾಯತ್ ಮುಖಾಂತರ ಗ್ರಾಮಸ್ಥರಿಗೆ ತಿಳಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.