ಬೆಳಗಾವಿ : ಮಹಾರಾಷ್ಟ್ರದಲ್ಲಿ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೊನಾ ರಾಜ್ಯಕ್ಕೆ ಅಂಟದಿರಲಿ ಎಂದು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿ, ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹಿಡಿದು ಬನ್ನಿ ಅಂತ ಹೇಳಿದರೂ ಜನ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕಿದ್ದ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದು ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಭೀತಿ ಶುರುವಾಗಿದೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್, ಕಾಗವಾಡ ಚೆಕ್ಪೋಸ್ಟ್ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರು ಬಿಂದಾಸ್ ಆಗಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಕಾಗವಾಡ ಚೆಕ್‌ಪೋಸ್ಟ್ ಬಳಿ ಗಡಿಯವರೆಗೆ ಆಟೋ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ನಲ್ಲಿ ಬಂದು ಅಲ್ಲಿಂದ ಚೆಕ್‌ಪೋಸ್ಟ್ ಬಳಿ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 37 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಅದರಲ್ಲೂ ನಗರದ ವಿಶ್ವೇಶ್ವರಯ್ಯ ನಗರದಲ್ಲಿ ಒಂದೇ ಕುಟುಂಬ ಹಾಗೂ ಆ ಕುಟುಂಬದ ಸಂಬಂಧಿಕರಲ್ಲಿ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ವಿಶ್ವೇಶ್ವರಯ್ಯ ನಗರದ ಪ್ರತ್ಯೇಕ ಎರಡು ಕಡೆ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಸೋಂಕಿತರ ನಿವಾಸದ ಸುತ್ತ 50 ಮೀಟರ್ ವ್ಯಾಪ್ತಿ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಲಾಗಿದ್ದು, ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ ಅನಗೋಳ ಪ್ರದೇಶದಲ್ಲಿ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಘೋಷಿಸಲಾಗಿದೆ.