ಬೆಳಗಾವಿ:ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸರಿಗೂ ಇದೀಗ ಕೊರೊನಾ ಸೋಂಕು ತಗುಲುತ್ತಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್, ಕಾಗವಾಡ ಚೆಕ್ ಪೋಸ್ಟ್ ಮತ್ತು ಗೋವಾ ಗಡಿಯ ಕಣಕುಂಬಿ ಚೆಕ್ ಪೋಸ್ಟ್ನಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದ ಕೆಎಸ್ಆರ್‌ಪಿ ಸಿಬ್ಬಂದಿ ಇದೀಗ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವುದನ್ನೇ ಬಿಟ್ಟಿದ್ದಾರೆ.
ಹನ್ನೆರಡು ಜನ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಕೆಎಸ್ಆರ್‌ಪಿ ಮೀಸಲು ಪಡೆಯ ಇನ್ನೆಷ್ಟು ಸಿಬ್ಬಂದಿಗೆ ಕೊರೊನಾ ವಕ್ಕರಿಸಲಿದೆಯೋ ಎಂಬ ಭಯ ಶುರುವಾಗಿದೆ. ಈ ಕಾರಣಕ್ಕಾಗಿ ಮುಂಜಾಗ್ರತೆ ಕ್ರಮವಾಗಿ ಕೊಗನೊಳ್ಳಿ ಚೆಕ್ ಪೋಸ್ಟ್, ಕಾಗವಾಡ ಚೆಕ್ ಪೋಸ್ಟ್ ಮತ್ತು ಕಣಕುಂಬಿ ಚೆಕ್ ಪೋಸ್ಟ್ನಲ್ಲಿ ನೇಮಕ ಮಾಡಿದ್ದ ಕೆಎಸ್ಆರ್‌ಪಿ ತುಕಡಿಗಳನ್ನು ಈಗಾಗಲೇ ವಾಪಸ್ ಕಳುಹಿಸಲಾಗಿದೆ. 697ಕ್ಕೂ ಅಧಿಕ ಸಿಬ್ಬಂದಿ ಬೆಳಗಾವಿ ತಾಲೂಕಿನ ಮಚ್ಚೆ ಕೆಎಸ್ಆರ್‌ಪಿ ಬಟಾಲಿಯನ್ನಲ್ಲಿದ್ದು, ಇದೀಗ ಈ ಎಲ್ಲ ಸಿಬ್ಬಂದಿಗೂ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಕಾರಣಕ್ಕೆ ಹೊರಗಡೆ ಡ್ಯೂಟಿ ಮಾಡಿ ಬರುವ ಸಿಬ್ಬಂದಿಗೆ ಬಟಾಲಿಯನ್ ಒಳಗೆ ಪ್ರತ್ಯೇಕ ಕೊಠಡಿ ನೀಡಿದ್ದು, ಅಲ್ಲಿ ಸುಮಾರು ಎಂಬತ್ತಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತ ಸಿಬ್ಬಂದಿ ಕುಟುಂಬಸ್ಥರಿಬ್ಬರಿಗೆ ಸೋಂಕು ತಗುಲಿದೆ.