ಕರ್ನಾಟಕ

karnataka

ETV Bharat / state

ಕಾನೂನು ಕಾಲೇಜುಗಳಲ್ಲಿ ಪ್ರವೇಶಾತಿ ಸೀಟುಗಳ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಸಚಿವ ಎಚ್.ಕೆ.ಪಾಟೀಲ್ - ಈಟಿವಿ ಭಾರತ ಕನ್ನಡ

ಕಾನೂನು ಕಾಲೇಜುಗಳಲ್ಲಿ ಪ್ರವೇಶಾತಿ ಸೀಟುಗಳ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಎಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.

increase-the-number-of-admission-seats-in-law-colleges-minister-hk-patil-assured
ಕಾನೂನು ಕಾಲೇಜುಗಳಲ್ಲಿ ಪ್ರವೇಶಾತಿ ಸೀಟುಗಳ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಸಚಿವ ಎಚ್.ಕೆ.ಪಾಟೀಲ್

By ETV Bharat Karnataka Team

Published : Dec 12, 2023, 9:06 PM IST

ಬೆಂಗಳೂರು/ ಬೆಳಗಾವಿ : ರಾಜ್ಯದಲ್ಲಿರುವ ನಾಲ್ಕೈದು ಕಾನೂನು ಕಾಲೇಜುಗಳಲ್ಲಿ ಪ್ರವೇಶಾತಿ ಸೀಟುಗಳ ಪ್ರಮಾಣಗಳನ್ನು ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ಹಿರಿಯ ಶಾಸಕ ಹೆಚ್ ಡಿ ರೇವಣ್ಣ ಅವರು ಪ್ರಶ್ನೆ ಕೇಳಿ, ಹೊಳೆನರಸೀಪುರದಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪ್ರವೇಶ ಅವಕಾಶದ ಪ್ರಮಾಣವನ್ನು ದುಪ್ಪಟ್ಟುಗೊಳಿಸಬೇಕು ಎಂದು ಮನವಿ ಮಾಡಿದರು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸೀಟುಗಳ ಸಂಖ್ಯೆ ಹೆಚ್ಚಿಸಲು ಅಗತ್ಯವಾದ ಕೊಠಡಿ ಹಾಗೂ ಇತರ ಮೂಲ ಸೌಲಭ್ಯಗಳಿಗೆ ಕಾನೂನು ವಿಶ್ವವಿದ್ಯಾಲಯದ ತಜ್ಞರ ತಂಡವು ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಎಚ್ ಕೆ ಪಾಟೀಲ್, ಹೊಳೆನರಸೀಪುರ ಕಾಲೇಜು ಉತ್ತಮವಾಗಿ ನಡೆಯುತ್ತಿದೆ. ಎಲ್‍ಎಲ್‍ಬಿ 5 ವರ್ಷದ ಕೋರ್ಸಿಗೆ 139, 3 ವರ್ಷದ ಕೋರ್ಸಿಗೆ 381 ಅರ್ಜಿಗಳು ಬಂದಿವೆ. ಇದನ್ನು ದುಪ್ಪಟ್ಟುಗೊಳಿಸಬೇಕು ಎಂದು ರೇವಣ್ಣ ಒತ್ತಾಯಿಸುತ್ತಿದ್ದಾರೆ. 15 ದಿನಗಳ ಹಿಂದೆ ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅದರ ಅನುಸಾರ ಕಾನೂನು ವಿಶ್ವವಿದ್ಯಾಲಯ ಸ್ಥಳ ಪರಿಶೀಲನೆ ಮಾಡಿದೆ. ವರದಿ ಸಲ್ಲಿಕೆ ನೀಡಬೇಕಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಸೀಟುಗಳ ವಿಷಯದಲ್ಲಿ ರಾಜ್ಯ ಸರ್ಕಾರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಪೂರ್ವಾನುಮತಿ ಬೇಕಿದೆ ಎಂದರು. ಈ ವೇಳೆ, ಮಧ್ಯಪ್ರವೇಶಿಸಿದ ಹೆಚ್​ ಡಿ ರೇವಣ್ಣ, ಬಾರ್ ಕೌನ್ಸಿಲ್‍ನ ಅನುಮತಿ ನಿರೀಕ್ಷೆಯಲ್ಲಿರಿಸಿ ರಾಜ್ಯ ಸರ್ಕಾರವೇ ಹೆಚ್ಚುವರಿ ಸ್ಥಾನಗಳಿಗೆ ಅವಕಾಶ ನೀಡಬಹುದು ಎಂದು ಸಲಹೆ ನೀಡಿದರು.

ಈ ಅವಕಾಶಗಳಿದ್ದರೆ ಪರಿಶೀಲಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಹೊಳೆನರಸೀಪುರದ ಕಾಲೇಜುಗಳಿಗಷ್ಟೇ ಅಲ್ಲ, ರಾಜ್ಯದ ಇತರ ಹಲವಾರು ಕಾಲೇಜುಗಳಿಂದಲೂ ಬೇಡಿಕೆಗಳಿವೆ. ಇತ್ತೀಚೆಗೆ ಕಾನೂನು ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಕಲಬುರಗಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ 1000 ಎಕರೆ ಜಮೀನು ಹಸ್ತಾಂತರ: ಸಚಿವ ಶಿವಾನಂದ ಎಸ್ ಪಾಟೀಲ್

ಇದಕ್ಕೂ ಮುನ್ನ, ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಎಸ್.ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ, ಕಲಬರುಗಿಯಲ್ಲಿ ಪಿಎಂ ಮಿತ್ರ ಪಾರ್ಕ್​​ ಯೋಜನೆಯಡಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸಲು 1000 ಎಕರೆ ಜಮೀನನ್ನು ಕ್ಯಾಬಿನೆಟ್ ಅನುಮೋದನೆಯೊಂದಿಗೆ ರಾಜ್ಯ ಸರ್ಕಾರವು ಹಸ್ತಾಂತರಿಸಲಿದೆ ಎಂದು ವಿಧಾನ ಪರಿಷತ್‌ಗೆ ತಿಳಿಸಿದರು.

ABOUT THE AUTHOR

...view details