ಬೆಳಗಾವಿ :ನೆರೆಯ ರಾಜ್ಯ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರ ಸೇರಿ ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈ ಬಾರಿಯೂ ಭಾರಿ ಪ್ರಮಾಣದಲ್ಲಿ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಅಲ್ಲಿನ ಹಲವು ಬ್ಯಾರೇಜ್ಗಳು ತುಂಬಿ ಹರಿಯುತ್ತಿವೆ. ಇತ್ತ ಗಡಿಯಲ್ಲಿರುವ ಚಿಕ್ಕೋಡಿ ಉಪವಿಭಾಗದ ನದಿಗಳ ನೀರಿನ ಮಟ್ಟವೂ ಹೆಚ್ಚಾಗುತ್ತಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಮಳೆ ಆರ್ಭಟದ ಪರಿಣಾಮ ರಾಧಾನಗರಿ ಡ್ಯಾಂನದ ಪಂಚಗಂಗಾ ನದಿಗಳಿಗೆ 12ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನೀರಿನ ಮಟ್ಟ ಒಂದೇ ರಾತ್ರಿಯಲ್ಲಿ 7 ಅಡಿಗಳಷ್ಟು ಏರಿಕೆಯಾಗಿದೆ. ಕೊಲ್ಲಾಪುರ ಜಿಲ್ಲೆಯ ರಾಜಾರಾಮ ಬ್ಯಾರೇಜ್ ಸೇರಿದಂತೆ ಒಟ್ಟು 27 ಬ್ಯಾರೇಜ್ಗಳು ಜಲಾವೃತವಾಗಿವೆ. ಮತ್ತೊಂದೆಡೆ ಕೊಯ್ನಾ ಅಣೆಕಟ್ಟು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಕೊಯ್ನಾ ಡ್ಯಾಂನಲ್ಲಿ ಕಳೆದ 24ಗಂಟೆಗಳಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದೆ. ಕೊಂಕಣದ ಎಲ್ಲ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.
ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿವೆ. ಹೀಗೆ ಮಳೆ ಮುಂದುವರಿದರೆ ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಲಿದೆ. ಸದ್ಯ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳು ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.