ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಕಾಡ್ಗಚ್ಚಿನಂತೆ ಹಬ್ಬುತ್ತಿದೆ. ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದ್ರೆ, ಮೃತರ ಸಂಖ್ಯೆ 300ಕ್ಕೆ ತಲುಪಿದೆ. ಕೊರೊನಾ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಹೋಟೆಲ್ ಉದ್ಯಮವೂ ಹೊರತಾಗಿಲ್ಲ.
ಕೊರೊನಾದಿಂದ ವ್ಯಾಪಾರ ಇಲ್ಲದೇ ಕಂಗೆಟ್ಟಿದ್ದ ಹೋಟೆಲ್ ಉದ್ಯಮಿಗಳು ಲಾಕ್ಡೌನ್ ಸಡಿಲಿಕೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಹಕರು ಹೋಟೆಲ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್ಗಳತ್ತ ಮುಖ ಮಾಡುತ್ತಿದ್ದು, ಹೋಟೆಲ್ ಮಾಲೀಕರ ಮೊಗದಲ್ಲಿ ಸಂತಸ ಮೂಡಿದೆ.
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಹೇರಿದ್ದ ಲಾಕ್ಡೌನ್ ಇದೀಗ ಹಂತ ಹಂತವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯ ಹೋಟೆಲ್ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ಜಿಲ್ಲೆಯ ಬಹುತೇಕ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್‍ಗಳು ಮರು ಆರಂಭವಾಗಿದ್ದು, ಜನರು ಕೂಡ ಹೋಟೆಲ್‍ಗಳತ್ತ ಮುಖಮಾಡುತ್ತಿದ್ದಾರೆ.
ಕೊರೊನಾ ಪರಿಣಾಮವಾಗಿ ಮೂರು ತಿಂಗಳ ಕಾಲ ಹೋಟೆಲ್‍ಗಳನ್ನು ಬಂದಿಟ್ಟಿದ್ದ ಮಾಲೀಕರು ಕಳೆದ ಎರಡ್ಮೂರು ತಿಂಗಳಿಂದ ಪುನಃ ಆರಂಭಿಸಿದ್ದಾರೆ. ಮರು ಆರಂಭವಾದ ಕೆಲ ದಿನಗಳ ಕಾಲ ಗ್ರಾಹಕರಿಂದ ನೀರಸ ಪ್ರತಿಕ್ರಿಯೆಗೆ ಕಂಗೆಟ್ಟಿದ್ದ ಹೋಟೆಲ್ ಉದ್ಯಮಿಗಳು ಇದೀಗ ಅಲ್ಪಸ್ವಲ್ಪ ಗ್ರಾಹಕರ ಆಗಮನದಿಂದ ನಿಟ್ಟುಸಿರು ಬಿಡುವಂತಾಗಿದೆ. ಲಾಕ್ಡೌನ್ ಪೂರ್ವ ಇದ್ದ ಗ್ರಾಹಕರ ಪ್ರತಿಕ್ರಿಯೆ ಪ್ರಸ್ತುತ ಇರದಿದ್ದರೂ, ಶೇ. 50ರಷ್ಟು ಜನರು ಹೋಟೆಲ್‍ಗಳಿಗೆ ಬರುತ್ತಿದ್ದಾರೆ. ಕೊರೊನಾ ಭಯಕ್ಕೆ ಇನ್ನೂ ಶೇ. 50ರಷ್ಟು ಜನರು ಹೋಟೆಲ್‍ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಮಾರ್ಗಸೂಚಿಗಳ ಪಾಲನೆ :ನಗರ ಹಾಗೂ ಜಿಲ್ಲೆಯ ಬಹುತೇಕ ಹೋಟೆಲ್ ಮಾಲೀಕರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ. ಹೋಟೆಲ್‌ಗೆ ಆಗಮಿಸುವ ಪ್ರತಿ ಗ್ರಾಹಕರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೇ ಹೋಟೆಲ್‍ಗಳಲ್ಲಿಯೇ ಸ್ಯಾನಿಟೈಸರ್ ಮಸೀನ್ ಅಳವಡಿಸಲಾಗಿದ್ದು, ಪ್ರತಿ ಗ್ರಾಹಕರಿಗೆ ಸ್ಯಾನಿಟೈಸರ್ ಬಳಸಲು ಹೋಟೆಲ್‍ಗಳಿಂದ ಕೋರಲಾಗುತ್ತಿದೆ.
ಅಲ್ಲದೇ ಪ್ರತಿ ಗ್ರಾಹಕರ ಕೋರಿಕೆಯ ಮೇರೆಗೆ ಎಲ್ಲ ಹೋಟೆಲ್‍ಗಳಲ್ಲಿ ಬಿಸಿನೀರು ನೀಡಲಾಗುತ್ತಿದೆ. ಸಾಧ್ಯವಾದಷ್ಟು ಸಾಮಾಜಿಕ ಅಂತರದಲ್ಲೇ ಹೋಟೆಲ್‍ಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ನಗರವಾಸಿಗಳಿಗೆ ಹೋಟೆಲ್ನಲ್ಲಿ ಕೂಡುವ ಬದಲು ಪಾರ್ಸಲ್ ಒಯ್ಯುವಂತೆ ಮನವಿ ಮಾಡುವುದರ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಹೋಟೆಲ್ ಮಾಲೀಕರು ಕೈ ಜೋಡಿಸುತ್ತಿದ್ದಾರೆ.
ಕೆಲಸ ಅರಸಿ ಹುಟ್ಟೂರು ಬಿಟ್ಟು ನಗರಕ್ಕೆ ಬಂದಿದ್ದ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರಣದಿಂದಲೂ ಹೋಟೆಲ್ ಉದ್ಯಮ ಮೊದಲಿನಿಂತೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಹಾಗೂ ದೇಶದ ಆರ್ಥಿಕ ಸ್ಥಿತಿ ಮೊದಲಿನಂತೆ ಬಂದರೆ ಮಾತ್ರ ಹೋಟೆಲ್ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೊದಲಿನ ವೈಭವ ಮರುಕಳಿಸಲು ಸಾಧ್ಯ ಎಂಬುವುದು ಹೋಟೆಲ್ ಮಾಲೀಕರ ಅಭಿಪ್ರಾಯ.