ಅಥಣಿ:ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಅಕ್ಕಿಯನ್ನು ಕೆಲವು ಅಧಿಕಾರಿಗಳು ಹಣದ ಆಸೆಗೆ ಮಧ್ಯವರ್ತಿಗಳ ಜೊತೆಯಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟಕ್ಕೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಶಾಸಕ ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಸಾಗಾಟ: ಸೂಕ್ತ ತನಿಖೆಗೆ ಶಾಸಕ ಕುಮಟಳ್ಳಿ ಸೂಚನೆ - ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಸಾಗಾಟ
ಅಥಣಿಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಬಡ ಕುಟುಂಬಗಳಿಗೆ ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
![ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಸಾಗಾಟ: ಸೂಕ್ತ ತನಿಖೆಗೆ ಶಾಸಕ ಕುಮಟಳ್ಳಿ ಸೂಚನೆ ಶಾಸಕ ಮಹೇಶ್ ಕುಮಟಳ್ಳಿ](https://etvbharatimages.akamaized.net/etvbharat/prod-images/768-512-10191877-thumbnail-3x2-bng.jpg)
ಪಕ್ಕದ ಮಹಾರಾಷ್ಟ್ರದ ಗಡಿಗೆ ಹೊಂದಿರುವ ಅಥಣಿಯ ಮಾರ್ಗವಾಗಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅಥಣಿ ಹಾಗೂ ಐಗಳಿ ಪೊಲೀಸ್ ಠಾಣೆಯಲ್ಲಿ 6ಕ್ಕೂ ಹೆಚ್ಚು ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ದಾಖಲಾಗಿವೆ. ಇವುಗಳು ನಾಮಕಾವಾಸ್ತೆ ಅಷ್ಟೇ. ದಿನನಿತ್ಯ ರಾತ್ರಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಯಥೇಚ್ಛವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿದ್ದು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬಡವರ ಪಾಲಿಗೆ ಬಂದಿರುವ ಅಕ್ಕಿಯನ್ನು ಕೆಲವು ಬಡ ಕುಟುಂಬದವರು ಆಮಿಷಗಳಿಗೆ ಬಲಿಯಾಗಿ ಕೆಲವು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿಯನ್ನು ಕೊಂಡುಕೊಳ್ಳುವವರಿಗೆ ಹಾಗೂ ಸಾಗಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಅಧಿಕಾರಿಗಳು ಸಹಾಯ ಮಾಡುತ್ತಿರುವ ವಿಚಾರವಾಗಿ ನನಗೆ ಸರಿಯಾದ ಮಾಹಿತಿಯಿಲ್ಲ. ಅಕ್ರಮದಲ್ಲಿ ಭಾಗಿಯಾಗಿದ್ದವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.