ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿ 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಳೆಯಿಲ್ಲದೇ ಬತ್ತಿ ಹೋಗಿರುವ ನದಿಯೊಡಲಿನ ಅಲ್ಲಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರ ಇದಕ್ಕಾಗಿ ನಿಯಮಗಳನ್ನು ಮಾಡಿದ್ದರೂ ಗುತ್ತಿಗೆ ಪಡೆಯದೇ ಅಧಿಕಾರಿಗಳಿಗೆ ತಿಳಿಯದಂತೆ ದಂದೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಸಮೀಪದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ರಾತ್ರಿ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೇ ನೇತೃತ್ವದಲ್ಲಿ ಹಠಾತ್ ದಾಳಿ ನಡೆಸಿ 26 ಟ್ರ್ಯಾಕ್ಟರ್, 4 ಜೆಸಿಬಿ ಮತ್ತು ಒಂದು ಟಿಪ್ಪರ್ ವಾಹನ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಎಸ್ಪಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, "ಅಕ್ರಮ ಮರಳು ಗಣಿಗಾರಿಕೆಗೆ ಬಳಸುವ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಮರಳು ದಂಧೆಕೋರರು ಪ್ರವೇಶ ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದವರು ಗಣಿಗಾರಿಕೆ ನಡೆಸುತ್ತಿದ್ದರು. ನಮ್ಮ ಪೊಲೀಸರು ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿದ್ದಾರೆ. ತನಿಖೆ ಮುಂದುವರಿಸಿದ್ದೇವೆ" ಎಂದು ಮಾಹಿತಿ ನೀಡಿದರು.