ಬೆಳಗಾವಿ:ಸುಪ್ರೀಂಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವು ಮಾಡಬೇಕು. ಇಲ್ಲಿಯವರೆಗೆ ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ. ಆದರೆ ಶಬ್ದದಿಂದ ಆಗುವ ದೊಡ್ಡ ತೊಂದರೆ ಇನ್ನೂ ನಿಂತಿಲ್ಲ. ಒಂದು ವೇಳೆ ಶಬ್ದ ನಿಲ್ಲದಿದ್ದರೇ ಮೇ 9 ರಂದು ರಾಜ್ಯದ 1 ಸಾವಿರ ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಪಠಣ ಮಾಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಬ್ದದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಶಬ್ದ ಮಾತ್ರ ಇನ್ನೂ ನಿಂತಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ನಿರಂತರವಾಗಿದೆ. ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಯಾವುದೇ ಕ್ರಮವಾಗಿಲ್ಲ. ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ. ಆದರೆ ಶಬ್ದದಿಂದ ಆಗುವ ದೊಡ್ಡ ತೊಂದರೆ ನಿಂತಿಲ್ಲ. ಹೀಗಾಗಿ ಮೇ 9ರಂದು ಓಂಕಾರ, ಭಜನೆ ಹಾಕುತ್ತೇವೆ. ಸರ್ಕಾರ, ಮುಸ್ಲಿಂ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಗುಡುಗಿದರು.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಬ್ದದ ವಿರುದ್ಧ ನಮ್ಮ ಹೋರಾಟ: ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಸಂಘರ್ಷ ಆಗಲಿದೆ. ಆಜಾನ್, ಭಜನೆ ವಿರುದ್ಧ ನಮ್ಮ ಹೋರಾಟ ಅಲ್ಲ, ಶಬ್ದದ ವಿರುದ್ಧ ನಮ್ಮ ಹೋರಾಟ. ಸರ್ಕಾರ ಕೂಡಲೇ ಯುಪಿ ಮಾದರಿಯಲ್ಲಿ ಮೈಕ್ ಕೆಳಗೆ ಇಳಿಸಬೇಕು. ಸಿಎಂ ಧೈರ್ಯ ತೆಗೆದುಕೊಂಡು ಮೈಕ್ ನಿಲ್ಲಿಸಬೇಕು. ಈ ರೀತಿ ದೌರ್ಬಲ್ಯ ತೋರಿದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸೀಟ್ ಬರಲ್ಲ. ಬಿಜೆಪಿ ಸರ್ಕಾರಕ್ಕೆ ಮುಸ್ಲಿಂರ ಒಂದೂ ಮತ ಬೀಳಲ್ಲ ಎಂದರು.
ಇದನ್ನೂ ಓದಿ:ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಮಾಡುವುದು ಕಾಂಗ್ರೆಸ್ಗೆ ರಕ್ತಗತ: ಸಚಿವ ಆರ್.ಅಶೋಕ್
ಎಂಡಿಎಫ್ ವಿರುದ್ಧ ತನಿಖೆಯಾಗಲಿ:ಮಂಗಳೂರಲ್ಲಿ ಎಂಡಿಎಫ್ ಸಂಘಟನೆ ಸಕ್ರಿಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಮಾಡಿದ್ದಾರೆ. ಅದರಿಂದ ಖಟ್ಟರ್ ಮುಸ್ಲಿಮರನ್ನು ತಯಾರಿಸುವ ಪ್ರಕ್ರಿಯೆ ನಡೆದಿದೆ. ಪಿಎಫ್ಐ, ಸಿಎಫ್‌ಐ, ಎಸ್‌ಡಿಪಿಐ, ಎಐಎಂಐಎಂ ಈ ಸಂಘಟನೆಗಳ ಜೊತೆ ಎಂಡಿಎಫ್ ಸಂಘಟನೆ ಹುಟ್ಟುಹಾಕಿದ್ದಾರೆ. ಈ ಎಲ್ಲ ಸಂಘಟನೆ ಹದ್ದುಬಸ್ತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು. ಎಂಡಿಎಫ್ ಚಟುವಟಿಕೆ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡಬೇಕು. ಪಿಎಫ್ಐ ಬ್ಯಾನ್ ಆಗಲೇಬೇಕು. ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಎಂಡಿಎಫ್ ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್‌ಖೈದಾ ಮಾದರಿ ವರ್ತನೆ, ಲಕ್ಷಣಗಳು ಕಾಣುತ್ತಿವೆ. ಈಗ ಹೊಸದಾಗಿ ಹುಟ್ಟು ಹಾಕಿದ್ದಾರೋ, ಮೊದಲು ಇತ್ತೋ? ಗೊತ್ತಿಲ್ಲ. ಕೂಡಲೇ ಸರ್ಕಾರ ಎಂಡಿಎಫ್ ಬಗ್ಗೆ ತನಿಖೆ ಮಾಡಿ ಅದು ಏನು ಅಂತಾ ಬಹಿರಂಗಪಡಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.