ಬೆಳಗಾವಿ: ಜಾರಕಿಹೊಳಿ ಸಹೋದರರು - ಪಕ್ಷ ಸೇರ್ಪಡೆ ಸಂಬಂಧ ಜೆಡಿಎಸ್ ನಾಯಕರ ಜೊತೆಗೆ ಮಾತುಕತೆ ನಡೆದಿರುವ ಸುಳಿವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಟ್ಟುಕೊಟ್ಟಿದ್ದಾರೆ.
ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆ ಊಹಾಪೋಹ ಸಂಬಂಧ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್ ಸೇರ್ಪಡೆ ಆಗಲಿರುವ ಯಾವ ನಾಯಕರ ಹೆಸರನ್ನು ನಾವು ಈವರೆಗೆ ಬಹಿರಂಗ ಪಡಿಸಿಲ್ಲ. ತಾಳಿ ಕಟ್ಟುವ ಮುಂಚೆ ಯಾವ ಹೆಣ್ಣೂ ಮದುವೆ ಆಗಿದೆ ಎಂದು ಹೇಳಲ್ಲ. ಈಗ ಬಂದು ನೋಡಿಕೊಂಡು ಹೋಗಿದ್ದಾರೆ ಎಂದಷ್ಟೇ ಹೇಳುತ್ತಾಳೆ.
ನಿಶ್ಚಿತಾರ್ಥ ಆದರೂ ಹೇಳಲ್ಲ, ತಾಳಿ ಕಟ್ಟಿದ ಮೇಲೆಯೇ ಹೆಂಡ್ತಿ ಅಂತ ಹೇಳಬೇಕು. ನೋಡಿಕೊಂಡು ಹೋಗಿದ್ದಾರೆ ಎಂದರೆ ಬೇರೆ ಯಾರೂ ನೋಡಲು ಬರಲ್ಲ. ಡೋರ್ ಓಪನ್ ಮಾಡಿ ಇಟ್ಟಿದ್ದಾರೆ, ಏನು ಸಂದೇಶ ಕೊಡಬೇಕೋ ಕೊಡ್ತಿದ್ದಾರೆ ಎಂದರು.
ಜಾರಕಿಹೊಳಿ ಬ್ರದರ್ಸ್ ಜೆಡಿಎಸ್ ಸೇರ್ಪಡೆ ಆಗ್ತಾರಾ? ನಾಯಕರ ಮಧ್ಯೆ ಪರಸ್ಪರ ಸಂದೇಶ ಹೋಗ್ತಿದ್ದಾವೆ, ಬರ್ತಿದ್ದಾವೆ. ಜೆಡಿಎಸ್ ಸೇರ್ಪಡೆ ಖಚಿತವಾಗುವುದು ಮಾತುಕತೆ ಪೂರ್ಣ ಆದ ಬಳಿಕವೇ. ಒಂದು ಸಭೆ ಮಾಡಿ ಡಿಕ್ಲೇರ್ ಮಾಡಿದಾಗಲೇ ಅದು ಬಹಿರಂಗವಾಗಲಿದೆ ಎನ್ನುವ ಮೂಲಕ ಮಾತುಕತೆ ನಡೆದಿರುವ ಸುಳಿವು ಬಿಟ್ಟುಕೊಟ್ಟರು.
ಮಹಾರಾಷ್ಟ್ರ ನಾಯಕರು ಮದುವೆ ಬಳಿಕ ವಾಲಗ ಊದುತ್ತಿದ್ದಾರೆ:ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ನಾಯಕರ ಉದ್ಧಟತನ ಹೇಳಿಕೆಗೆ ಕುಟುಕಿದ ಇಬ್ರಾಹಿಂ, ಕರ್ನಾಟಕದಲ್ಲಿ ಎಲ್ಲ ಭಾಷಿಕರು ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದಾರೆ. ಮೊದಲು ನೀವು ನಿಮ್ಮ ಊರು ನೋಡಿಕೊಳ್ಳಿ, ನಮ್ಮದರಲ್ಲಿ ಕೈ ಆಡಿಸಲು ಬರಬೇಡಿ. ಮರಾಠಿ ಭಾಷಿಕರು ಯಾರೂ ಇಲ್ಲಿ ಇರಲು ಆಗ್ತಿಲ್ಲ ಎಂದಿಲ್ಲ, ಎಲ್ಲರೂ ಸುಖವಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಮರಾಠಿ ಭಾಷಿಕ ರೈತರ ಸಾಲವೂ ಮನ್ನಾ ಆಗಿದೆ. ಬೆಳಗಾವಿಯಲ್ಲಿ 15 ಸಾವಿರ ಮರಾಠಾ ಭಾಷಿಕ ರೈತರ ಸಾಲಮನ್ನಾ ಆಗಿದೆ. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಮುಗಿದುಹೋದ ಅಧ್ಯಾಯ. ಗಡಿವಿವಾದ ಇಲ್ಲವೇ ಇಲ್ಲ, ಮದುವೆ ಆದ ಮೇಲೆ ವಾಲಗ ಊದಿದ್ರೆ ಏನು ಪ್ರಯೋಜನ. ಮಹಾರಾಷ್ಟ್ರ ನಾಯಕರು ಖಾಲಿ ವಾಲಗ ಊದುತ್ತಿದ್ದಾರೆ, ಊದುಕೊಳ್ಳಲಿ. ನಾವು ಇಲ್ಲಿ ಅರಾಮ ಆಗಿದ್ದೇವೆ. ನಮ್ಮ ಕೆಲಸ ನಮಗೆ, ಅವರ ಕೆಲಸ ಅವರಿಗೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ತಾಳಿ ಕಟ್ಟಿದವರಿಗೆ ನಾವು ಕೈ ಹಾಕುವುದಿಲ್ಲ, ಕನ್ಯೆ ಇದ್ದರೆ ಆಫರ್ ನೀಡುತ್ತೇವೆ: ಸಿ ಎಂ ಇಬ್ರಾಹಿಂ