ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿ: ರಮೇಶ್ ಜಾರಕಿಹೊಳಿ ಚಿಕ್ಕೋಡಿ (ಬೆಳಗಾವಿ): "ಲಕ್ಷ್ಮಣ್ ಸವದಿ ಬುದ್ದಿವಂತ ರಾಜಕಾರಣಿ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಐದು ವರ್ಷ ವಿಧಾನಪರಿಷತ್ ಸದಸ್ಯನಾಗಿದ್ದು ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತಾರೆ ಎಂಬುದು ನನಗೆ ಅಚ್ಚರಿಯಾಗಿದೆ" ಎಂದು ಮಾಜಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಮಹೇಶ್ ಕುಮಟಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ ಮುಂದಿನ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ" ಎಂದು ಹೇಳಿದರು. "ಒಂದು ವೇಳೆ ಮಹೇಶ್ ಕುಮಟಳ್ಳಿ ಟಿಕೆಟ್ ಕೊಡದಿದ್ದರೆ ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಒಂದು ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ :ಧಾರವಾಡ ಗ್ರಾಮೀಣ ಕ್ಷೇತ್ರ: ಬಿಜೆಪಿಯಿಂದ ಈ ಬಾರಿ ಯಾರಿಗೆ ಟಿಕೆಟ್?
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸ್ವಾಭಿಮಾನಕ್ಕೆ ಧಕ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು. "ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ತಪ್ಪುವಂತಹ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿ ಪಕ್ಷದಲ್ಲಿ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಟಳ್ಳಿ, ಗೋಕಾಕನಿಂದ ರಮೇಶ್ ಜಾರಕಿಹೊಳಿ, ಕಾಗವಾಡನಿಂದ ಶ್ರೀಮಂತ ಪಾಟೀಲ್ ಸ್ವರ್ಧೆ ಮಾಡುತ್ತಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ" ಎಂದರು. "ಆರ್ಎಸ್ಎಸ್ ಮುಖಂಡರ ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಭೇಟಿಗೆ ಯಾವುದೇ ವಿಶೇಷ ಅರ್ಥವಿಲ್ಲ. ನಮ್ಮ ಹಿರಿಯರನ್ನು ಭೇಟಿಯಾಗಿದ್ದೇನೆ. ಇದೊಂದು ಸೌಜನ್ಯ ಭೇಟಿ" ಎಂದು ತಿಳಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿ, "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊನ್ನೆ ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಕೆಲವು ವಿಚಾರಗಳನ್ನು ಹೇಳಲು ಆಗುವುದಿಲ್ಲ. ನಾನು ಅವರ ಮುಖಾಂತರ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ತುಂಬಾ ದಿನದಿಂದ ಅವರನ್ನು ಭೇಟಿ ಆಗಿರಲಿಲ್ಲ. ಹಾಗಾಗಿ ಭೇಟಿ ಮಾಡಿ ಬಂದಿದ್ದೇನೆ" ಎಂದು ಪ್ರತಿಕ್ರಿಯಿಸಿದರು.
ಅಮ್ಮಜೇಶ್ವರಿ ಏತ ನೀರಾವರಿಗೆ ಚಾಲನೆ ವಿಚಾರ:ಮಾರ್ಚ್ 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಲಿದ್ದು, ಈ ವೇಳೆ ಸುಮಾರು 1250 ಕೋಟಿ ರೂಪಾಯಿ ವೆಚ್ಚದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ :ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ: ಸಿದ್ದರಾಮಯ್ಯ