ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಸಚಿವ ಪ್ರಿಯಾಂಕ್ ಖರ್ಗೆ

ಮಣಿಕಂಠ ರಾಠೋಡ್​ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

By ETV Bharat Karnataka Team

Published : Dec 6, 2023, 10:12 PM IST

Updated : Dec 6, 2023, 10:40 PM IST

ಬೆಳಗಾವಿ:ಕಳೆದ ವಿಧಾನಸಭೆ ಚುನಾವಣೆಯಲ್ಲಿಪರಾಜಿತ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ಘಟನೆ ಸಂಬಂಧ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸುವರ್ಣಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹಲ್ಲೆ ಮಾಡಿರುವುದಾಗಿ ಸುಳ್ಳು ದೂರು ದಾಖಲಿಸಿದ್ದಾರೆ. ಪೊಲೀಸ್ ತನಿಖೆಯಿಂದ, ಫೊರೆನ್ಸಿಕ್ ವರದಿಯಲ್ಲಿ ಇದು ಸ್ಪಷ್ಟವಾಗಿದೆ. ಈತನನ್ನು ಸಮರ್ಥಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿ ಮುಖಂಡರು ನನ್ನ ವಿರುದ್ಧ ಹೇಳಿಕೆ ನೀಡಿದ್ದರು ಎಂದರು.

ವಿಜಯೇಂದ್ರ ಈ ಹಲ್ಲೆಗೆ ನೇರವಾಗಿ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿ ಎಂದು ಹೇಳಿಕೆ ನೀಡಿದ್ದಾರೆ. ನನ್ನ ರಾಜೀನಾಮೆಗೂ ಆಗ್ರಹಿಸಿದ್ದರು. ಈಗ ಸತ್ಯ ಹೊರಬಂದಿದೆ. ನಾನು ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮಣಿಕಂಠ ರಾಠೋಡ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನನ್ನ ವಿರುದ್ಧ ಹೇಳಿಕೆ ಕೊಟ್ಟ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನಮ್ಮ ಸಿಎಲ್​ಪಿ ನಾಯಕರ ಜೊತೆ ಚರ್ಚಿಸಿ ಹಕ್ಕುಚ್ಯುತಿ ಮಂಡನೆ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತೇನೆ. ನನ್ನ ಸಹನೆ ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಈಗ ಸತ್ಯ ಹೊರಬಂದಿದೆ. ಬಿಜೆಪಿ ನಾಯಕರು ರಾಜೀನಾಮೆ ಕೊಡುತ್ತಾರಾ?. ವಿಜಯೇಂದ್ರಗೆ ತಂದೆಯ ಅನುಭವ ಬಂದಿರಬಹದು ಎಂದು ಅಂದುಕೊಂಡಿದ್ದೆ. ಆದರೆ ಅವರ ಸುತ್ತಮುತ್ತಲಿನವರು ಅವರನ್ನು ಮುಗಿಸಬೇಕೆಂದು ಇದ್ದಿರಬೇಕು. ವಿಜಯೇಂದ್ರ ಅವರು ಈ ಹಲ್ಲೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರೇ ಮಾಡಿಸಿದ್ದು ಅಂತ ಆರೋಪ ಮಾಡಿದ್ದಾರೆ. ಇದು ಹಕ್ಕು ಚ್ಯುತಿಯಲ್ಲವೇ?.‌ ಇಂಥ ವ್ಯಕ್ತಿಯನ್ನು ಸಮರ್ಥನೆ ಮಾಡಿದರೆ ನಿಮ್ಮ ವರ್ಚಸ್ಸು ಕಡಿಮೆ ಆಗುತ್ತೆ. ಹೇಳಿಕೆ ಕೊಡುವಾಗ ಜಾಗೃತೆ ಇರಲಿ. ಇಲ್ಲವಾದರೆ ನಿಮ್ಮನ್ನು ಕೋರ್ಟಿಗೆ ಎಳೆಯಬೇಕಾಗುತ್ತದೆ ಎಂದರು.

ಬಿಜೆಪಿಯವರು ಆಂತರಿಕ ಭಿನ್ನಾಭಿಪ್ರಾಯ ಮುಚ್ಚಿ ಹಾಕಲು ವ್ಯವಸ್ಥಿತ ನಾಟಕಗಳನ್ನು ಹುಟ್ಟು ಹಾಕುತ್ತಿದ್ದಾರೆ. ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಆಯ್ಕೆ ಬಗ್ಗೆ ಯಾರಿಗೂ ಸಮಾಧಾನ ಇಲ್ಲ‌, ಅವರ ಅಸಮಾಧಾನದ ಜ್ವಾಲೆ ಬಿಜೆಪಿಯನ್ನು ನಾಶ ಮಾಡಲಿದೆ ಎಂದರು.

19.11.2023ರಲ್ಲಿ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ದೂರು ಸಲ್ಲಿಸುತ್ತಾನೆ. ಮಣಿಕಂಠ ರಾಠೋಡ್ ಬಿಜೆಪಿಯ ದತ್ತು ಪುತ್ರನಾ, ಮಣಿಕಂಠ ರಾಠೋಡ್ ಬಿಜೆಪಿ ನಾಯಕರನ್ನು ಸಾಕ್ತಾನೋ ಗೊತ್ತಿಲ್ಲ. ಮಣಿಕಂಠ ರಾಠೋಡ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 19ರಂದು ದಾಖಲಿಸಿದ್ದ ದೂರಿನಲ್ಲಿ, ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಮಾಲಗತ್ತಿ ಸಮೀಪ ರಾಷ್ಟ್ರೀಯ ಹೆದ್ದಾರಿ-150 ರ ಬದಿಯಲ್ಲಿ ತಮ್ಮ ಫಾರ್ಮ್ ಹೌಸ್‌ನಿಂದ ಕಲಬುರಗಿಗೆ ತೆರಳುತ್ತಿದ್ದರು. ಅವರ ಜೊತೆ ಇಬ್ಬರು ಸ್ನೇಹಿತರು ಇದ್ದರು. ಬೆಳಗಿನ ಜಾವ 2.40ಕ್ಕೆ ಶಂಕರವಾಡಿ ಕ್ರಾಸ್ ಹತ್ತಿರ 8-10 ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿ ಓಡಿ ಹೋಗಿದ್ದರು ಎಂದು ಆರೋಪಿಸಿದ್ದರು. ಅಧಿಕಾರಿಗಳು ಹಾಗೂ ರಾಜಕೀಯ ವಿರೋಧಿಗಳು ಎಂದು ದೂರು ನೀಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಣಿಕಂಠ ರಾಠೋಡ್ ಕುಂಡಲಿ ಏನಿದೆ ಎಂದು ಹೇಳುತ್ತೇನೆ. ಆತನ ವಿರುದ್ಧ ಒಟ್ಟು 33 ಕೇಸ್ ಅನ್ನು ಬಿಜೆಪಿ ಸರ್ಕಾರವೇ ದಾಖಲಿಸಿದೆ. ಅನ್ನಭಾಗ್ಯದ ಅಕ್ಕಿ ಕಳ್ಳತನ ಸಂಬಂಧ 22 ಕೇಸ್ ಇದೆ. ಹಾಲಿನ ಪುಡಿ ಕಳ್ಳತನದ ಮೇಲೆ ಒಂದು ಕೇಸ್ ಇದೆ. ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ, ತೆಲಂಗಾಣದಲ್ಲಿ 9 ಪ್ರಕರಣ ದಾಖಲಾಗಿವೆ. ಮೂರು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. ಯಾದಗಿರಿಯಲ್ಲಿ ಮಕ್ಕಳ ಹಾಲನ್ನು ಕದ್ದಿರುವ ಕೇಸ್​ನಲ್ಲಿ ಒಂದು ವರ್ಷದ ಅವಧಿಗೆ ಶಿಕ್ಷೆಗೆ ಒಳಗಾಗಿದ್ದಾನೆ. ಇದೆಲ್ಲಾ ಆಗಿದ್ದು ಬಿಜೆಪಿ ಅವಧಿಯಲ್ಲಿ. ಹೀಗಿದ್ದರೂ ಆತನ ಮೇಲಿನ ಗಡಿಪಾರು ಆದೇಶವನ್ನು ವಾಪಸ್ ಪಡೆದು ಆತನಿಗೆ ಟಿಕೆಟ್ ನೀಡಿದ್ದರು. ಇಂಥ ಕಳ್ಳರಿಗೆ, ಸುಳ್ಳರಿಗೆ ಬಿಜೆಪಿ ಕೈಗೊಂಬೆ ಏಕೆ ಆಗಿದೆ? ಎಂದು ಕಿಡಿಕಾರಿದರು.

ಈತ ದೂರು ಕೊಟ್ಟಾಗ ಬಿಜೆಪಿ ನಾಯಕರೆಲ್ಲರೂ ಆತನ ಬೆಂಬಲಕ್ಕೆ ಬಂದರು. ಬಡವರ ಅಕ್ಕಿ ಕದಿಯುವವರು, ಹಾಲಿನ‌ ಪುಡಿ ಕದಿಯುವವರು ಬಿಜೆಪಿಯ ನಾಯಕರಾ?. ವಿಜಯೇಂದ್ರ ಅವರು ನೇರವಾಗಿ ಸಚಿವರನ್ನು ಆರೋಪಿಯನ್ನಾಗಿ ಮಾಡುತ್ತಿದ್ದಾರೆ. ನ. 19ಕ್ಕೆ ಹಲ್ಲೆಯಾಗಿರುವ ಸಂದರ್ಭ ಆತ ಕಲಬುರಗಿಯಲ್ಲಿ ಇರಲಿಲ್ಲ. 1.00-2.40 ವರೆಗೆ ಆತ ಯಾದಗಿರಿಯ ಗುರಮಿಠಕಲ್​ನಲ್ಲಿ ಇದ್ದ. ಆತ ಯಾವ ಪೂಜೆಗೂ ಹೋಗಿಲ್ಲ. ಸ್ನೇಹಿತ ಶ್ರೀಕಾಂತ್ ಸುಳೇಗಾವ್ ಮನೆಗೆ ಹೋಗಿ ಕುಡಿದು ಕೂತಿದ್ದ. 1 ಗಂಟೆಗೆ ಕಲಬುರ್ಗಿಗೆ ಬರಬೇಕಾದರೆ ಚಪೇಟ್ಲಾ ಎಂಬ ಗ್ರಾಮ ಬರುತ್ತೆ. ಅಲ್ಲಿ ಟರ್ನ್ ಹಾಕುವಾಗ ಗಾಡಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯುತ್ತೆ. ಆಗ ತಮ್ಮನಿಗೆ ಕರೆ ಮಾಡಿ ಕಾರು ಡಿಕ್ಕಿ ಆಗಿದೆ, ಆಸ್ಪತ್ರೆಗೆ ಕರೆದೊಯ್ಯು ಎಂದು ಹೇಳುತ್ತಾನೆ. ಆಸ್ಪತ್ರೆಗೆ ಹೋಗುವ ವೇಳೆ ದೂರವಾಣಿ ಕರೆ ಮಾಡಿ, ಶಿಷ್ಯಂದಿರಿಗೆ ಹೇಳಿ ಬೇರೆ ಕಾರು ತೆಗೆದುಕೊಂಡು ಹೋಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾಟಕ ಮಾಡಿ ಎಂದು ಆದೇಶ ಕೊಡ್ತಾನೆ. ಆಗ ಆತನ ಶಿಷ್ಯಂದಿರು ಹಾಗೆ ಮಾಡಿ ಸುದ್ದಿ ಹರಡಿಸುತ್ತಾರೆ ಎಂದು ವಿವರಿಸಿದರು.

ಡಿಕ್ಕಿಯಾದ ಇನ್ನೊವಾ ಕಾರನ್ನು ರಿಪೇರಿಗೆ ಹೈದರಾಬಾದ್​ಗೆ ಕಳುಹಿಸುತ್ತಾರೆ. ನಂಬರ್ ಪ್ಲೇಟ್ ಕೂಡ ತೆಗೆದು ಹಾಕುತ್ತಾರೆ. ಇದು ಫೊರೆನ್ಸಿಕ್ ರಿಪೋರ್ಟ್​ನಲ್ಲಿದೆ. ಕಾರಿನಲ್ಲಿ ಒಂದು ತೊಟ್ಟು ರಕ್ತ ಸಿಕ್ಕಿಲ್ಲ. ಇವರೇ ಕಲ್ಲಿನಿಂದ ಹೊಡೆದು ಗಾಯ ಮಾಡಿದ್ದಾರೆ. ಬಿಜೆಪಿಯವರು ಇಂಥವರನ್ನು ಅಖಾಡಕ್ಕೆ ಇಳಿಸುತ್ತಿದ್ದಾರೆ. ಅವರಿಗೆ ನಾಚಿಕೆ ಬರಬೇಕು. ಎನ್.ರವಿ ಕುಮಾರ್ ಶಿಷ್ಯನೇ ಮಣಿಕಂಠ ರಾಠೋಡ್. ಕಲಬುರ್ಗಿ ಜಿಲ್ಲೆ ಹಾಳು ಮಾಡಲು ರವಿ ಕುಮಾರ್ ಕಾರಣ ಅಂತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ :ಆರ್​ಎಸ್​ಎಸ್ ಗರ್ಭಗುಡಿಯ ಹೊರಬಾಗಿಲಲ್ಲಿ ನಿಂತು ಜೀ.. ಹುಜೂರ್​ ಎಂದಷ್ಟೇ ಹೇಳಬೇಕು: ಸಿಎಂ ಲೇವಡಿ

Last Updated : Dec 6, 2023, 10:40 PM IST

ABOUT THE AUTHOR

...view details