ಬೆಳಗಾವಿ :ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಕಾಂಗ್ರೆಸ್‌ಗೆ ಇನ್ನಾದರೂ ಬುದ್ಧಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಗೊತ್ತಿದ್ದರೂ ಹಿಜಾಬ್ ಪರ ನಿಂತು ಕರ್ನಾಟಕದಲ್ಲಿ ಅಶಾಂತಿಯ ವಾತಾವಾರಣ ನಿರ್ಮಾಣ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡಿತು.
ಹಿಜಾಬ್ ಪ್ರಕರಣದ ಹೈಕೋರ್ಟ್ ತೀರ್ಪಿನ ಕುರಿತಂತೆ ಶಾಸಕ ಅಭಯ ಪಾಟೀಲ್ ಪ್ರತಿಕ್ರಿಯೆ ನೀಡಿರುವುದು.. ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ ಎಸ್‌ಎಫ್‌ಐ ಸೇರಿ ಕೆಲ ವಿದ್ಯಾರ್ಥಿ ಸಂಘಟನೆಗಳ ಜತೆಗೆ ಕಾಂಗ್ರೆಸ್ ನಿಂತಿತು. ಆದರೆ, ಇವತ್ತು ಹೈಕೋರ್ಟ್ ತನ್ನ ನಿರ್ಣಯ ಹೇಳಿದೆ.
ಇದನ್ನೂ ಓದಿ:ಹಿಜಾಬ್ ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್ಗೆ ಹೋಗ್ತೇವೆ: ಅರ್ಜಿದಾರರ ಪರ ವಕೀಲರ ಹೇಳಿಕೆ
ಹಿಜಾಬ್ ಪ್ರಕರಣದಲ್ಲಿ ಕಾಂಗ್ರೆಸ್ನವರಿಗೆ ನೇರ ಸಂದೇಶ ಹೋಗಿದೆ. ಒಂದು ಸಮಾಜವನ್ನು ಎತ್ತಿಕಟ್ಟಿ, ಕಾನೂನಿನ ವಿರುದ್ಧವಾಗಿ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು. ಇದಕ್ಕೆ ಕೋರ್ಟ್ ತಡೆ ನೀಡಿದೆ.
ಹಿಜಾಬ್ ಪ್ರಕರಣ ಪ್ರಾರಂಭವಾದಾಗಿನಿಂದ ಹಿಂದೂ ಸಂಘಟನೆ, ಹಿಂದೂಗಳ ಬಗ್ಗೆ ಅನಾಚಾರ ಮಾಡುವ ಕೆಲಸ ಕಾಂಗ್ರೆಸ್ ಮಾಡಿತು. ಅದಕ್ಕೆ ಇವತ್ತು ಹೈಕೋರ್ಟ್ ಉತ್ತರ ಕೊಟ್ಟಿದೆ. ಇನ್ನಾದರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದರು.
ದಿ ಕಾಶ್ಮೀರಿ ಫೈಲ್ಸ್ ಚಿತ್ರ ನೋಡಲು ಬೆಳಗಾವಿಗರಿಗೆ ನಿತ್ಯ 1000 ಫ್ರೀ ಟಿಕೆಟ್ ವ್ಯವಸ್ಥೆ:ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ನಿತ್ಯ ಒಂದು ಸಾವಿರ ಜನರಿಗೆ 'ದಿ ಕಾಶ್ಮೀರ ಫೈಲ್ಸ್' ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಮುಂದಿನ ಶುಕ್ರವಾರದಿಂದ ಪ್ರಕಾಶ್ ಚಿತ್ರಮಂದಿರದಲ್ಲಿ ನೈಟ್ ಶೋಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಜನರಿಗೆ 25 ಶೋ ಆರ್ಗನೈಸ್ ಮಾಡುತ್ತೇವೆ. ಪ್ರತಿಯೊಂದು ವಾರ್ಡ್‌ನಲ್ಲಿ 500 ರಿಂದ 1000 ಜನರಿಗೆ ಫ್ರೀ ಟಿಕೆಟ್ ನೀಡುತ್ತೇವೆ. ಯುವಕ ಮಂಡಳ, ಮಹಿಳಾ ಮಂಡಳ, ಸಾಮಾಜಿಕ ಕಾರ್ಯಕರ್ತರಿಗೆ ಫ್ರೀ ಪಾಸ್ ಕೊಡುವ ಮುಖಾಂತರ ಚಿತ್ರ ನೋಡುವ ವ್ಯವಸ್ಥೆ ಮಾಡುತ್ತೇವೆ. ಕಾರ್ಪೊರೇಟರ್‌ಗಳು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರದ ಪ್ರಮುಖರನ್ನು ಟಿಕೆಟ್ ಗಾಗಿ ಸಂಪರ್ಕಿಸಬಹುದು.
ಕಾಶ್ಮೀರದಲ್ಲಿ ನಡೆದ ಘಟನೆ ನೋಡಿದರೆ ರಕ್ತ ಕುದಿಯುತ್ತೆ, ಆ ರೀತಿ ಪರಿಸ್ಥಿತಿ ಇತ್ತು. ಅಲ್ಲಿ ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಮೇಲೆ ರೇಪ್ ಮಾಡುವಂತದ್ದು, ಸಾವಿರಾರು ಹಿಂದೂ ಮಕ್ಕಳನ್ನು ಕೊಲ್ಲುವಂತದ್ದು ಆಗಿದೆ. ಹತ್ತಾರು ಸಾವಿರ ಹಿಂದೂ ಯುವಕರನ್ನು ಕೊಂದು ದಫನ್ ಮಾಡುವಂತದ್ದನ್ನು ಕೆಲವರು ಮಾಡಿದ್ದಾರೆ. 90ರ ದಶಕದಲ್ಲಿ ಆದ ನರಸಂಹಾರ ಇಡೀ ಜಗತ್ತಿನಲ್ಲಿ ನಡೆದ ದುರ್ದೈವ. ಬಹುಸಂಖ್ಯಾತರು ಅನ್ನಿಸಿಕೊಳ್ಳುವ ದೇಶದಲ್ಲಿ ಸ್ಥಾನ ಇಲ್ಲದಿರುವಂತ ಕೆಲಸ ಜಿಹಾದಿಗಳು ಮಾಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಹಿಂದೂ ದಿ ಕಾಶ್ಮೀರ ಫೈಲ್ಸ್ ಚಿತ್ರ ನೋಡಬೇಕು. ಚಿತ್ರ ನೋಡುವುದರಲ್ಲಿ ಎರಡು ಅರ್ಥ ಇದೆ. ಒಂದು ನಮ್ಮ ಸಮಾಜದ ಮೇಲೆ ಯಾವ ರೀತಿ ಅತ್ಯಾಚಾರ ಮಾಡಿದ್ದಾರೆ ಅನ್ನೋದು, ಎರಡನೆಯದ್ದು ಭವಿಷ್ಯದಲ್ಲಿ ಅವರು ಏನು ಮಾಡುತ್ತಾರೆ ಅನ್ನೋದು. ಹೀಗಾಗಿ ಪ್ರತಿಯೊಬ್ಬರು ದಿ ಕಾಶ್ಮೀರ ಫೈಲ್ಸ್ ಚಿತ್ರ ನೋಡಬೇಕು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಮನವಿ ಮಾಡಿದರು.