ಬೆಳಗಾವಿ:ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ 15 ದಿನಗಳ ಹಿಂದೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಬಂಧ ಸಿಎಂ ಬಿಎಸ್‌ವೈ ಜತೆ ಮಾತನಾಡಿದ್ದೇನೆ. ಡಿಸೆಂಬರ್ 2018ರ ಬಳಿಕ ಈವರೆಗೆ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಹೀಗಾಗಿ ಅಧಿವೇಶನ ನಡೆಸುವಂತೆ ಮನವಿ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ತೀರ್ಮಾನಿಸೋದಾಗಿ ಸಿಎಂ ತಿಳಿಸಿದ್ದಾರೆ. ನಾನು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ ಸರ್ಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಉತ್ತರ ಕರ್ನಾಟಕದವರು.
ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಬೇಕೆಂಬ ಆಸೆ ನಮ್ಮದಿದೆ. ಹೀಗೆ ಅಧಿವೇಶನ ಮಾಡಿ ಅಂತಾ ನಿರ್ದೇಶನ ಕೊಡುವ ಅಧಿಕಾರ ನಮಗಿಲ್ಲ. ಸಚಿವ ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಸದ್ಯ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಅಧಿವೇಶನ ಕರೆಯಬಹುದೆಂಬ ಭರವಸೆ ಇದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯುವುದು ಸೂಕ್ತ ಎಂದು ಹೇಳಿದರು.