ಅಥಣಿ: ಸಿಂದಗಿ ಉಪ ಚುನಾವಣೆಯಲ್ಲಿ ನಾನು ಹಾಗೂ ನನ್ನ ಪುತ್ರ ಚಿದಾನಂದ ಸವದಿ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಅಥಣಿ ಪಟ್ಟಣದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ಸಿಂದಗಿ ಉಪಚುನಾವಣೆ ಉಸ್ತುವಾರಿ ನನಗೆ ನೀಡಿದ್ದಾರೆ. ನಾಳೆ ನಾಡಿದ್ದು ಸಿಂದಗಿ ಕ್ಷೇತ್ರಕ್ಕೆ ತೆರಳಿ ಅಲ್ಲಿರುವ ಪಕ್ಷದ ಮುಖಂಡರು, ಹಾಗೂ ಸ್ಥಳೀಯ ನಾಯಕರು, ಸಮುದಾಯದ ಮುಖಂಡರ ಜೊತೆ ಸಭೆ ನಡೆಸುತ್ತೇನೆ. ಇನ್ನು ಅಭ್ಯರ್ಥಿ ಯಾರೆಂಬುದು ಘೋಷಣೆ ಆಗಿಲ್ಲ. ಸ್ಥಳೀಯರ ಭಾವನೆ ಅಭಿಪ್ರಾಯ ಸಂಗ್ರಹಣೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
ಸಿಂದಗಿ - ಹಾನಗಲ್ ಎರಡು ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಾರಿ ಅಂತರದಿಂದ ಗೆಲುವು ಸಾದಿಸುತ್ತದೆ. ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಿಲ್ಲೆ ಆಗಿದ್ದರಿಂದ ಅಲ್ಲಿರುವ ಜನರು ಆಗ ಭಾಗದ ಮುಖ್ಯಮಂತ್ರಿ ಅವರಿಗೆ ಬೆಂಬಲ ನೀಡುತ್ತಾರೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದೆ, ಒಂದು ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.