ಬೆಳಗಾವಿ:25 ವರ್ಷಗಳಿಂದಲೂ ಕಾಂಗ್ರೆಸ್ನಲ್ಲಿದ್ದೇನೆ. ಎದುರಾಳಿ ಯಾರೇ ಆಗಿರಲಿ, ಗೋಕಾಕ್ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ತಾನೇ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಉಪಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪ್ರಚಾರದ ಅಖಾಡಕ್ಕೆ ಧುಮಕಿರುವ ಲಖನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಎದುರಾಳಿ ಯಾರು ಆಗ್ತಾರೋ ಗೊತ್ತಿಲ್ಲ. ಆದರೆ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದ್ದು, ಅದನ್ನ ಸರಿಪಡಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ. ಅದಕ್ಕೆ ತಯಾರಿಯನ್ನೂ ಆರಂಭಿಸಿದ್ದೇನೆ. ರಮೇಶ್ ಅವರ ರಾಜಕೀಯ ತಂತ್ರಗಾರಿಕೆ ನನಗೆ ಗೊತ್ತು. ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ. ರಮೇಶ್ ಜಾರಕಿಹೊಳಿ ಮೂರು ಜನ ಅಳಿಯರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯಿಂದಲೂ ಜಾರಕಿಹೊಳಿ ಕುಟುಂಬ ಕಾಂಗ್ರೆಸ್ನಲ್ಲಿದೆ. ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಅಳಿಯಂದರ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವೆ. ಈಗ ಟಾಸ್ ಆಗಿದೆ. ನಾನು ಬ್ಯಾಟಿಂಗ್ ಆಯ್ದುಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ರು.
ಸತೀಶ್ ಲಖನ್ ತಲೆ ಕೆಡಸುತ್ತಿದ್ದಾನೆ ಎಂದು ರಮೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಲಖನ್ ಯಾರು, ಯಾರ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂಬುದು ಈಗ ಮಾತನಾಡುವುದು ಬೇಡ. ಮೂವರು ಅಳಿಯಂದರು ರಮೇಶ್ ತಲೆಕೆಡಿಸುತ್ತಿದ್ದಾರೆ. ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿಗೆ ಹೋಗಿದ್ದಾರೆ. ಚುನಾವಣೆ ಮಾಡುವವರೊಬ್ಬರು, ದುಡಿಯುವವರೊಬ್ಬರು, ಮೆರೆಯುವವರೊಬ್ಬರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಸಹೋದರ ರಮೇಶ್ಗೆ ಲಖನ್ ಟಾಂಗ್ ಕೊಟ್ಟರು.
ಬ್ಲ್ಯಾಕ್ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಬದುಕು ರೂಪಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಲಖನ್ ಹೇಳಿದ್ರು.