ಬೆಳಗಾವಿ: ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಬಡವರು, ಶೋಷಿತರು ಹಾಗೂ ಹಿಂದುಳಿದವರನ್ನು ಕಡೆಗಣಿಸಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಿಗೆ ಸತೀಶ್ ಜಾರಕಿಹೊಳಿ ಹತ್ತಿರದವರಾಗಿದ್ದರು. ನನಗೂ ಅನೇಕ ಬಾರಿ ಅವರು ಸಹಾಯ, ಸಹಕಾರ ನೀಡಿದ್ದಾರೆ. ಬಸವಕಲ್ಯಾಣದ ಪ್ರಚಾರ ಮುಗಿಸಿ ನೇರವಾಗಿ ಬೆಳಗಾವಿಗೆ ಆಗಮಿಸಿದ್ದು, ಸತೀಶ್ ಜಾರಕಿಹೊಳಿ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದರು.
ಬಿಜೆಪಿ ಇತೀಚಿನ ದಿನಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಒಡೆದಾಳುವ ಚಿಂತನೆ, ಬಡವರನ್ನು ಬಡವರಾನ್ನಾಗಿಯೇ ನೋಡುವ ಸಂಸ್ಕೃತಿ, ಅನ್ನದಾತರನ್ನು ಕಡೆಗಣಿಸಿರುವ ಜೊತೆಗೆ ನಾಲ್ಕು ತಿಂಗಳಿಂದ ಮುಷ್ಕರ ನಡೆಸಿದ್ದರೂ ಅವರನ್ನು ನಿರ್ಲಕ್ಷಿಸಿದೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ. ರಾಜ್ಯದಲ್ಲಿ ನ್ಯಾಯಯುತ ಬೇಡಿಕೆಗಳನ್ನು ಮುಂದಿರಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರೂ ಸೌಜನ್ಯಕ್ಕೂ ಕುಳಿತು ಮಾತನಾಡಲು ಆಗುತ್ತಿಲ್ಲ. ಇದನ್ನೆಲ್ಲಾ ನೋಡಿದ್ರೆ ಹಿಂಬಾಗಿಲಿನಿಂದ ಬರುವ ರಾಜಕಾರಣದ ವ್ಯವಸ್ಥೆಯಿಂದ ಇಂತಹ ದುಸ್ಥಿತಿಗೆ ಬಂದು ತಲುಪಲಿದೆ ಎಂಬುದಕ್ಕೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವೇ ಒಂದು ಉದಾಹರಣೆ ಎಂದರು.
ಸಾಮಾನ್ಯ ಜನರಿಗೂ ಕಾರ್ಯಕ್ರಮವನ್ನ ನೀಡಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಯೋಗ್ಯ ಅಭ್ಯರ್ಥಿ. ರಾಜಕೀಯ ಚಿಂತನೆ ಹೊಂದಿರುವ ವ್ಯಕ್ತಿಯಾಗಿದ್ದು, ಅವರು ಪಾರ್ಲಿಮೆಂಟ್ಗೆ ಹೋಗಬೇಕು. ಅದಕ್ಕಾಗಿ ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು ಎಂದರು.