ಬೆಳಗಾವಿ:ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ನಾನು ಪ್ರಮುಖ ಆಕಾಂಕ್ಷಿ. ಆದರೆ, ದೆಹಲಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ ಆಧರಿಸಿ ಅವಕಾಶ ಕೊಟ್ಟರೆ ಜವಾಬ್ದಾರಿಯಿಂದ ನಿಭಾಯಿಸುವೆ. ಅವಕಾಶ ಕೊಡದಿದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಈ ಭಾಗದ ಸಮಸ್ಯೆಗಳ ಧ್ವನಿ ಆಗುವೆ. ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ನಾನೇನು ಎಐಸಿಸಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದರು.
ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಸ್ ಆರ್ ಪಾಟೀಲ.. ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ನಮ್ಮ ಹೈಕಮಾಂಡ್ ಆಯ್ಕೆ ಮಾಡಲಿದೆ. ಪ್ರತಿಯೊಬ್ಬರಿಗೂ ಪ್ರತಿಪಕ್ಷ ನಾಯಕನಾಗುವ ಆಸೆ ಇರುತ್ತದೆ. ಆದರೆ, ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ನಮ್ಮಲ್ಲಿ ಹಗ್ಗಜಗ್ಗಾಟವಿಲ್ಲ ಎಂದರು.
ಚಳಿಗಾಲ ಅಧಿವೇಶನ ಮೂರೇ ದಿನನಡೆಸಲು ನಿರ್ಧರಿಸಿದ್ದು ಸರ್ಕಾರದ ತಪ್ಪು ನಿರ್ಧಾರ. ಕನಿಷ್ಠ 10 ದಿನವಾದರೂ ಅಧಿವೇಶನ ನಡೆಸಬೇಕಿತ್ತು. ಮೂರೇ ದಿನ ಸಮಗ್ರ ಚರ್ಚೆಗೆ ಸಾಲುವುದಿಲ್ಲ. ಪ್ರವಾಹ ಪುನರ್ವಸತಿ ಕಾರ್ಯ ಸರಿಯಾಗಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಅಧಿವೇಶನ ಬೆಂಗಳೂರಿನಲ್ಲಿ ಏರ್ಪಡಿಸಿ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಅವಮಾನ ಮಾಡಿದೆ. ಈ ಭಾಗದ ರೈತರು, ಸಂತ್ರಸ್ತರ ಪ್ರತಿಭಟನೆಗೆ ಸರ್ಕಾರ ಹೆದರಿದೆ ಎಂದು ದೂರಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳ ಪೈಕಿ 12 ಸ್ಥಾನ ಗೆಲುವು ಸಾಧಿಸಲಿದೆ. ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ಸಿಕ್ಕರೂ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.