ಬೆಳಗಾವಿ : ವೈಯಕ್ತಿಕವಾಗಿ ನನಗೆ ಅನ್ಯಾಯವಾಗಿದ್ದು ನಿಜ. ಬಿಜೆಪಿ ಹೈಕಮಾಂಡ್ ಡಾ.ರವಿ ಪಾಟೀಲ ಅವರಿಗೆ ಟಿಕೆಟ್ ನೀಡಿದೆ. ಎಲ್ಲರೂ ಒಗ್ಗಟ್ಟಾಗಿ ಅವರನ್ನೇ ಗೆಲ್ಲಿಸೋಣ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು. ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 30 ವರ್ಷಗಳಿಂದ ಬಿಜೆಪಿ ಸಂಘಟನೆ ಮಾಡಿ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದೆ. ಆದರೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರಲಿಲ್ಲ. 2018ರಲ್ಲಿ ನನ್ನನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದ ಸಂದರ್ಭದಲ್ಲಿ ಜಾತಿ,ಬೇಧ ಮರೆತು ಉತ್ತರ ಕ್ಷೇತ್ರದವರು ಗೆಲ್ಲಿಸಿದರು. ನನಗೆ ಎರಡು ಬಾರಿ ಟಿಕೆಟ್ ತಪ್ಪಿದಾಗಲೂ ಪಕ್ಷ ಬಿಟ್ಟಿಲ್ಲ. ವೈಯಕ್ತಿಕವಾಗಿ ನನಗೆ ಅನ್ಯಾಯವಾಗಿದ್ದು ನಿಜ. ಆದರೆ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸದಾ ಬಿಜೆಪಿ ಜೊತೆಗಿದ್ದೇನೆ, ಹಿರಿಯ ನಾಯಕರು ನನ್ನೊಂದಿಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ಯಾವ ಸಮುದಾಯಕ್ಕೂ ಅನ್ಯಾಯ ಮಾಡದೆ ಪ್ರಾಮಾಣಿಕವಾಗಿ ಐದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಹೈಕಮಾಂಡ್ ಈ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಡಾ.ರವಿ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ನನ್ನ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅನಿಲ್ ಬೆನಕೆ ಅಭ್ಯರ್ಥಿ ಎಂದುಕೊಂಡೇ ಡಾ. ರವಿ ಪಾಟೀಲ ಗೆಲುವಿಗೆ ಶ್ರಮಿಸಬೇಕು. ಕಳೆದ ನಾಲ್ಕು ದಿನಗಳಿಂದ ಅನಿಲ್ ಬೆನಕೆ ಅವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧೆ ನಡೆಸುತ್ತಾರೆ ಎನ್ನುವ ಸುದ್ದಿಗಳಿದ್ದವು. ಆದರೆ ಅವೆಲ್ಲವೂ ಶುದ್ಧ ಸುಳ್ಳ ಎಂದು ಅನಿಲ್ ಬೆನಕೆ ಸ್ಪಷ್ಟಪಡಿಸಿದರು.