ಬೆಳಗಾವಿ :ಸಾರ್ವಜನಿಕವಾಗಿ ಪತ್ನಿಯನ್ನೇ ಪತಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಬೆಳಗಾವಿಯ ಕೋಟೆ ಕೆರೆ ಬಳಿ ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದೆ. ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್ (27) ಎಂಬುವರು ಕೊಲೆಯಾದ ದುರ್ದೈವಿ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಮಂಜೂರ್ ಇಲಾಹಿ ನದಾಫ್ (34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಗಾಂಧಿನಗರದ ಹೀನಾಕೌಸರ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು, ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ.
ಕೌಟುಂಬಿಕ ಕಲಹ :ಮಂಜೂರ್-ಹೀನಾಕೌಸರ್ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣಕ್ಕೆ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್ ವಿಚ್ಛೇದನ ಕೋರಿ, ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್‌ಗೆ ಹಾಜರಾಗಿ ಗಾಂಧಿನಗರದಲ್ಲಿರುವ ತವರು ಮನೆಗೆ ಹೀನಾಕೌಸರ್ ವಾಪಸ್ ಆಗುತ್ತಿದ್ದರು.