ಚಿಕ್ಕೋಡಿ (ಬೆಳಗಾವಿ): ತಾಲೂಕಿನ ಕರೋಶಿ ಗ್ರಾಮದ ಮುಖ್ಯ ರಸ್ತೆ ಪಕ್ಕದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸ್ನೇಹಿತನನನ್ನೇ ಕೊಲೆ ಮಾಡಿ ಎಸೆದಿದ್ದ ಎಂದು ಗೊತ್ತಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಸುನೀಲ ಮಹಾದೇವ ಸಾಳುಂಕೆ (25) ಕೊಲೆಯಾದವ. ಜೈನಾಪೂರ ಗ್ರಾಮದ ಮಹಾಂತೇಶ ತಳವಾರ ಕೊಲೆ ಮಾಡಿದ ಆರೋಪಿ. ಮೃತ ಸುನೀಲ ಮತ್ತು ಬಂಧಿತ ಆರೋಪಿ ಮಹಾಂತೇಶ ಇಬ್ಬರು ಗೆಳೆಯರು. ಮಹಾಂತೇಶನ ಹೆಂಡತಿಯೊಂದಿಗೆ ಸುನೀಲ ಅಸಭ್ಯವಾಗಿ ವರ್ತಿಸಿದ್ದನಂತೆ. ಇದರಿಂದ ರೊಚ್ಚಿಗೆದ್ದಿದ್ದ ಮಹಾಂತೇಶ, ಸ್ನೇಹಿತನನ್ನು ಅ.2 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೋಟಾರ್ ಸೈಕಲ್ ಮೇಲೆ ಕರೋಶಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ವಿಪರೀತವಾಗಿ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನ ಕರೋಶಿ ಗ್ರಾಮದ ಚಿಕ್ಕೋಡಿ-ಹುಕ್ಕೇರಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು.