ಬೆಳಗಾವಿ :ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ್ರೆ, ಈ ವಿಷಯ ತಿಳಿದ ಪತ್ನಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಪತಿ ಗುರುನಾಥ ನಾರಾಯಣ ತಾವರೆ (45), ಈತನ ಪತ್ನಿ ಮೀನಾಕ್ಷಿ ನಾರಾಯಣ ತಾವರೆ (35) ಆತ್ಮಹತ್ಯೆಗೆ ಶರಣಾದ ದಂಪತಿ. ಗುರುನಾಥ ತಾವರೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಇವರು ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಬೆಳಗಾವಿ ನಗರದ ಮೀನಾಕ್ಷಿ ಜತೆಗೆ 13 ವರ್ಷಗಳ ಹಿಂದೆ ವಿವಾಹವಾಗಿತ್ತು.
ಪತಿ-ಪತ್ನಿ ನಡುವೆ ಆಗಾಗ ಆಂತರಿಕ ಕಲಹಗಳು ನಡೆಯುತ್ತಿತ್ತು. ಇಬ್ಬರ ಜಗಳ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಪರಸ್ಪರ ಹೊಂದಾಣಿಕೆಯ ಜೀವನ ಸಾಗಿಸುವುದಾಗಿ ಒಪ್ಪಿಕೊಂಡಿದ್ದ ದಂಪತಿ, ಬೈಲಹೊಂಗಲ ಪಟ್ಟಣದಲ್ಲಿ ವಾಸವಿದ್ದರು. ಅಷ್ಟಾದರೂ ಇವರ ಜಗಳ ನಿಂತಿರಲಿಲ್ಲ. ಸೋಮವಾರ ತಡರಾತ್ರಿ ಶಿಕ್ಷಕ ಗುರುನಾಥ ಮನೆಯಿಂದ ಹೊರ ಬಂದು ಪಟ್ಟಣದ ಹೊರ ವಲಯದ ಬೆಳಗಾವಿ ರಸ್ತೆಯ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಸೇವಿಸಿದ ಗುರುನಾಥ ನಾರಾಯಣ ತಾವರೆ ವಿಷಯ ತಿಳಿದ ಪತ್ನಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದಂಪತಿಗೆ 10 ವರ್ಷ ಹಾಗೂ ಮೂರು ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಸ್ಥಳಕ್ಕೆ ಎಎಸ್ಪಿ ಪ್ರದೀಪ್ ಗುಂಟೆ, ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್ಐ ಈರಪ್ಪ ರಿತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.