ಅಥಣಿ:ತಾಲೂಕಿನಲ್ಲಿ ಬಿಡದೆ ಮೂರು ದಿನಗಳಿಂದ ಸುರಿದ ಕುಂಭದ್ರೋಣ ಮಳೆಗೆ ಅಪಾರ ಪ್ರಮಾಣದ ಬೇಳೆ ಹಾನಿ ಸಂಭವಿಸಿದ್ದು, ಅನ್ನದಾತನಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡುವಂತೆ ರೈತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡ ಮಂಗಸೂಳಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅತಿವೃಷ್ಟಿಯಿಂದ ನೂರಾರು ಹೆಕ್ಟೇರ್ ಬೆಳೆ ನಾಶ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ ಅಥಣಿ ತಾಲೂಕಿನ ಅಗ್ರಾಣಿ ಹಳ್ಳ ಅಪಾಯದ ಮಟ್ಟ ಮೀರಿ ಹರಿದು ಪರಿಣಾಮವಾಗಿ ಸಂಬರಗಿ, ಜಂಬಗಿ, ಶಿವನೂರ, ಮದಭಾವಿ, ಆಜೋರ, ಶಿರೂರು, ಅರಹಟ್ಟಿ, ಮಸರಗುಪ್ಪಿ ಆಜೂರ, ಸಂಬರಗಿ, ತಾಂವಶಿ, ಕಲ್ಲೂತಿ, ಶಿವನೂರ, ಹೋಸಟ್ಟಿ, ಮಸರಗುಪ್ಪಿ, ದೇವರರಡ್ಡೇರಟ್ಟಿ, ಮುರಗುಂಡಿ, ವಡೆಯರಟ್ಟಿ, ತಂಗಡಿ, ಶಿನಾಳ, ಹುಲಗಬಾಳ ಗ್ರಾಮಗಳಲ್ಲಿ ಬೆಳೆದಿರುವ ಹಲವಾರು ಬೆಳೆಗಳು ನೀರಿಗೆ ಕೊಚ್ಚಿಕೊಂಡು ಜಮೀನುಗಳು ಜಲಾವೃತವಾಗಿವೆ.
ಅತಿವೃಷ್ಟಿಯಿಂದ ನೂರಾರು ಹೆಕ್ಟೇರ್ ಬೆಳೆ ನಾಶ ತೊಗರಿ, ಶೇಂಗಾ, ಗೋವಿನಜೋಳ, ಬಿಳಿಜೋಳ, ಹೆಸರು, ಗೋದಿ, ಕುಸುಬೆ, ಸಜ್ಜೆ, ಕಡಲೆ, ಹಿಗೆ ಹಲವಾರು ಬೆಳೆಗಳನ್ನು ರೈತರು ಮುಂಗಡವಾಗಿ ಬಿತ್ತನೆ ಕಾರ್ಯ ಮಾಡಿದ್ದರು. ಅಕಾಲಿಕ ಮಳೆಯಿಂದ ಬಿತ್ತನೆ ಮಾಡಿರುವ ರೈತರಿಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ನಾಟಿ ಮಾಡಿರುವ ಕಬ್ಬು ತೋಟದಲ್ಲಿ ನೀರು ಸಂಗ್ರಹದಿಂದ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರ ತಕ್ಷಣವೇ ಸರ್ವೇ ಕಾರ್ಯ ನಡೆಸಿ ಪರಿಹಾರ ವಿತರಣೆ ಮಾಡುವಂತೆ ರೈತ ಮುಖಂಡ ಗೋಪಾಲ ಮೀಸಾಳ ಆಗ್ರಹಿಸಿದರು.
ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ನೆಲಕ್ಕಚ್ಚಿವೆ. ವರ್ಷದ ಬೆಳೆ ನಂಬಿದ ಅನ್ನದಾತನಿಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಹಾಗೂ ಹಲವಾರು ಬೆಳೆಗಳು ಮಳೆ ನೀರಿಗೆ ಜಲಾವೃತಗೊಂಡು ಕೊಳೆಯುವ ಹಂತ ತಲುಪಿವೆ. ಹಲವಾರು ಕಡೆ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಹಾಗಾಗಿ ರೈತರಿಗೆ ಬೆಳೆ ನಾಶದ ಪರಿಹಾರ ವಿತರಣೆ ಮಾಡಬೇಕು ಮತ್ತು ತಾಲೂಕಿನಲ್ಲಿ ಅನೇಕ ಮನೆಗಳು ಬಿದ್ದಿರುವ ಪರಿಣಾಮ ಸಂತ್ರಸ್ತರಿಗೆ ತಕ್ಷಣವೇ ಪರಿಹಾರಧನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದರು.