ಕರ್ನಾಟಕ

karnataka

ETV Bharat / state

ಮಕ್ಕಳ ಜೀವದ ಜೊತೆ ಚೆಲ್ಲಾಟ: ಆಟೋ ಚಾಲಕರ ವಿರುದ್ಧ ಖಡಕ್ ಕ್ರಮಕ್ಕೆ ಮುಂದಾದ ಹು-ಧಾ ಪೊಲೀಸರು - ಈಟಿವಿ ಭಾರತ್​ ಕನ್ನಡ ನ್ಯೂಸ್​

ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 67 ಆಟೋ ರಿಕ್ಷಾಗಳನ್ನು ಹುಬ್ಬಳ್ಳಿ -ಧಾರವಾಡ ಪೊಲೀಸರು ಜಪ್ತಿ ಮಾಡಿದ್ದಾರೆ.

ಆಟೋ ಚಾಲಕರು
ಆಟೋ ಚಾಲಕರು

By

Published : Jun 9, 2023, 8:25 PM IST

ಹುಬ್ಬಳ್ಳಿ :ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಮಕ್ಕಳನ್ನು ಶಾಲೆಗಳಿಗೆ ಬಿಡುವ ಮತ್ತು ಕರೆದುಕೊಂಡು ಬರುವ ಆಟೋ ರಿಕ್ಷಾ ಹಾಗೂ ಕ್ಯಾಬ್ ಚಾಲಕರು ಹಣದಾಸೆಗೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಆರು ಮಂದಿ ಕೂರುವ ಆಸನದಲ್ಲಿ ಹತ್ತರಿಂದ ಹದಿನೈದು ಮಂದಿ, ಚಾಲಕನ ಅಕ್ಕಪಕ್ಕ ನಾಲ್ವರು, ಬೀಳುವ ಭಯದಲ್ಲಿ ಆಟೋವನ್ನು ಬಿಗಿಯಾಗಿ ಕಷ್ಟಪಟ್ಟು ಹಿಡಿದುಕೊಳ್ಳುವ ಮಕ್ಕಳು, ಎರಡೂ ಬಾಗಿಲ ಹೊರಗಡೆ ಬ್ಯಾಗ್‌ಗಳ ರಾಶಿ, ಉಸಿರುಗಟ್ಟುವ ವಾತಾವರಣದಲ್ಲಿ ಎಳೆ ಜೀವಗಳ ಪಯಾಣ. ಇದು ಶಾಲಾ ಮಕ್ಕಳ ನಿತ್ಯದ ಪಯಣ.!

ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋಗಳಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿವೆ. ಆಟೋದಲ್ಲಿ ಆರಕ್ಕಿಂತ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದೊಯ್ಯಬಾರದು, ಶಾಲಾ ಬ್ಯಾಗ್‌ಗಳನ್ನು ಹೊರಗಡೆ ಜೋತು ಹಾಕಬಾರದು, ಚಾಲಕರು ಮಕ್ಕಳನ್ನು ಕಾಲ ಮೇಲೆ ಕುಳ್ಳಿರಿಸಿಕೊಳ್ಳಬಾರದು, ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು ಎಂಬಿತ್ಯಾದಿ ನಿಯಮಗಳಿವೆ. ಆದರೆ ಇವ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ‌. ಹೀಗಾಗಿ ಹು-ಧಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸುತ್ತಿದ್ದಾರೆ.

ಪೊಲೀಸ್​ ಪ್ರಕಟಣೆ : ಹುಬ್ಬಳ್ಳಿ- ಧಾರವಾಡದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ 67 ಆಟೋ ರಿಕ್ಷಾಗಳನ್ನು ಜಪ್ತಿ ಮಾಡಿದ್ದಾರೆ. ಮಕ್ಕಳನ್ನು ಸಾಗಿಸುವ ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರು ಕಾನೂನು ಪಾಲಿಸಬೇಕು ಎಂದು ಹು-ಧಾ ಪೊಲೀಸ್ ಆಯುಕ್ತ ರಮಣ ಗುಪ್ತಾ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದು, ಕಾರ್ಯಾಚರಣೆ ಮುಂದುವರೆಸುವದಾಗಿ ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.

ಬಹುತೇಕ ಆಟೋಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗುತ್ತಾರೆ. ಅವುಗಳ ಮಾಲೀಕರು, ಚಾಲಕರು ಮಕ್ಕಳ ಹಾಗೂ ಆಟೋಗಳ ಸುರಕ್ಷತೆಯ ಕಡೆಗೆ ಗಮನ ಹರಿಸುತ್ತಿಲ್ಲ. ಕಡಿಮೆ ಬಾಡಿಗೆ ದರದಲ್ಲಿ ಮಕ್ಕಳು ಶಾಲೆಗೆ ಹೋಗಿ, ಮನೆಗೆ ಬಂದರಾಯಿತು ಎನ್ನುವ ಮನೋಭಾವ ಬಹುತೇಕ ಪಾಲಕರದ್ದು. ಆರು ಮಕ್ಕಳು ಕೂರುವ ಸಾಮರ್ಥ್ಯದ ಆಟೋದಲ್ಲಿ 10-15 ಮಕ್ಕಳನ್ನು ತುಂಬುವುದು, ಮಿನಿ ಬಸ್‌ಗಳ ಒಂದು ಆಸನದಲ್ಲಿ ನಾಲ್ಕು ರಿಂದ ಐದು ಮಕ್ಕಳನ್ನು ಕೂರಿಸುವುದು ಸಾಮಾನ್ಯವಾಗಿದೆ.

ಇನ್ನೂ ಕೆಲವು ಆಟೋ ಚಾಲಕರು, ಒಂದು ಕೈಲಿ ಸ್ಟೇರಿಂಗ್‌ ಹಿಡಿದರೆ ಮತ್ತೊಂದು ಕೈಲಿ ಮೊಬೈಲ್‌ ಫೋನ್‌ ಹಿಡಿದು ಮಾತನಾಡುತ್ತಾ ಆಟೋ ಚಲಾಯಿಸುತ್ತಾರೆ. ಆದರ್ಶ ನಗರ, ವಿಜಯನಗರ, ದೇವಾಂಗಪೇಟೆ, ಕೇಶ್ವಾಪುರ, ಬೆಂಗೇರಿ, ಕೋಟಿಲಿಂಗೇಶ್ವರನಗರ, ಹಳೇಹುಬ್ಬಳ್ಳಿ, ಚನ್ನಪೇಟೆ, ಆನಂದನಗರ ಭಾಗದ ವಿವಿಧೆಡೆ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಒಳರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ತಗ್ಗು ಗುಂಡಿಗಳ ನಡುವೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಆಟೋ ಚಲಾಯಿಸಿದರೆ ಅಪಾಯವನ್ನು ಆಹ್ವಾನಿಸಿದಂತೆ. ಸದ್ಯ ಯಾವುದೇ ದುರ್ಘಟನೆ ಸಂಭವಿಸದಿರಲು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ :ನಗರದ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಬೇಡ : ಆಟೋ ಚಾಲಕರ ಆಗ್ರಹ

ABOUT THE AUTHOR

...view details