ಬೆಳಗಾವಿ: ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ ನಲ್ಲಿ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಕ್ಕೂ ಅಧಿಕ ಹೊರ ಗುತ್ತಿಗೆ ನೌಕರರು, ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ನಮಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಪಿ ಎಫ್ ಕಟ್ಟುತ್ತಿಲ್ಲ, ಸಾಕಷ್ಟು ಮ್ಯಾನ್ ಪವರ್ ಎಜೆನ್ಸಿಯಿಂದ ಮೋಸ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು.
ಸಂಘದ ರಾಜ್ಯಾಧ್ಯಕ್ಷ ಭೀಮ ಶೆಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲೆಯಂತಹ ದೊಡ್ಡ ಜಿಲ್ಲೆಯಲ್ಲಿ ರಾಮ ಕಂಪ್ಯೂಟರ್ ಏಜೆನ್ಸಿಯಿಂದ ಹೊರ ಗುತ್ತಿಗೆ ನೌಕರರಿಗೆ ಬಹಳಷ್ಟು ಮೋಸ ಆಗುತ್ತಿದೆ. ಪ್ರತಿ ತಿಂಗಳು 2 -3 ಸಾವಿರ ರೂ ಸಂಬಳ ಕಡಿತ ಮಾಡಿ ನೀಡಲಾಗುತ್ತಿದೆ. ಅದನ್ನೂ ಏಜೆನ್ಸಿಯವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೂ ಇದೆ ಎಂದು ಆರೋಪಿಸಿದರು.
ಹೊರಗುತ್ತಿಗೆ ನೌಕರರ ಈ ಏಜೆನ್ಸಿ ತಗೆದು ಹಾಕಿ, ಇಲಾಖೆಯಿಂದ ನೇಮಕ ಮಾಡಿಕೊಳ್ಳಬೇಕು. ಕನಿಷ್ಠ ವೇತನ ನಮಗೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು. ಸಂಘದ ಗೌರವಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕೆ.ಹನುಮೇಗೌಡ, ಚಂದ್ರಪ್ಪ ಹೊಸಕೇರಾ, ಎಂ. ಜಂಬಯ್ಯನಾಯ್ಕ, ಕೆ.ಮುನಿಯಪ್ಪ, ಶಾಂತಕ್ಕ ಗಡ್ಡಿಯವರ, ಎಲ್.ಭವಾನಿ ಸೇರಿದಂತೆ ಮತ್ತಿತರರು ಇದ್ದರು.
ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ:ಇಲ್ಲಿನ ಸುವರ್ಣ ಗಾರ್ಡನ್ ಬಳಿ ಟೆಂಟ್ನಲ್ಲಿ ಇಂದು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಪ್ರತಿಭಟನಾನಿರತರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಕಾರ್ಮಿಕ ಮಂಡಳಿಯ ಅಡಿ ಮದ್ಯಪಾನ ಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ವಾರ್ಷಿಕ ಆದಾಯದಲ್ಲಿ ಶೇ.10ರಷ್ಟು ಕಲ್ಯಾಣ ನಿಧಿಗೆ ವರ್ಗಾಯಿಸಬೇಕು. ಮದ್ಯಪಾನ ಪ್ರಿಯರ ಪ್ರತಿಭಾನ್ವಿತ ಮಕ್ಕಳಿಗೆ ಮಾಸಾಶನ ನೀಡಬೇಕು. ಮದ್ಯಪಾನ ಪ್ರಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗಮಿಸಿ ಮದ್ಯ ಪ್ರಿಯರ ಸಮಸ್ಯೆಗಳನ್ನು ಆಲಿಸಿದರು.
ಇದನ್ನೂಓದಿ:ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್