ಬೆಳಗಾವಿ: ಬೆಳಗಾವಿಯ ಚಳಿಗಾಲ ಅಧಿವೇಶನ ಕೇವಲ ಪ್ರತಿಭಟನೆಯ ಅಧಿವೇಶನ ಆಗಬಾರದು. ಈ ಭಾಗದ ನೈಜ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪ್ರತಿಭಟನೆಗಳ ಉದ್ದೇಶ ಸರಿ ಇರಬಹುದು. ಆದರೆ, ಇಲ್ಲಿ ಅಧಿವೇಶನ ನಡೆಯೋದೇ ಪ್ರತಿಭಟನೆ ನಡೆಯಲು ಎಂಬ ಅಪಖ್ಯಾತಿಯಿದೆ. ಹಾಗಾಗಿ, ಪ್ರತಿಭಟನೆಗಳನ್ನು ಕಡಿಮೆಗೊಳಿಸಲು ಸಂಬಂಧಿಸಿದ ಇಲಾಖೆಗಳ ಜೊತೆಗೆ ಮಾತನಾಡಿ ಅಧಿವೇಶನದೊಳಗೆ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಭಾಗದ ನೈಜ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.
ಡಿ.4 ರಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. 3500 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದ್ದು, ಬೇರೆ ಬೇರೆ ಜಿಲ್ಲೆಯಿಂದಲೂ ಸಿಬ್ಬಂದಿ ಬರುತ್ತಾರೆ. ಊಟ, ವಸತಿ, ಕುಡಿಯುವ ನೀರಿನ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡುವಂತೆ ಸೂಚಿಸಿದ್ದೇನೆ. ಅದಕ್ಕೆ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೂಕ್ತ ಬಂದೋಬಸ್ತ್ ಮಾಡಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಧಿವೇಶನ ನಡೆಸುತ್ತೇವೆ ಎಂದು ತಿಳಿಸಿದರು.
ಇನ್ನು ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಐದು ಕೋಟಿ ರೂ. ಅನುದಾನ ನೀಡಲಾಗಿದ್ದು, ಐನೂರು ಜನರಿಗೆ ಇರುವ ವಸತಿ ಗೃಹ ಮುಂದಿನ ವರ್ಷದೊಳಗೆ ಪೂರ್ಣವಾಗುತ್ತದೆ. ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಈ ಬಾರಿ ಶೆಡ್ ನಿರ್ಮಿಸುತ್ತೇವೆ ಎಂದರು. ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಪರಿಶೀಲನೆ ಮಾಡಿದ್ದೇನೆ. ಅನೇಕ ವಿಚಾರಗಳು ಗಮನಕ್ಕೆ ಬಂದಿವೆ. ಅಪರಾಧಗಳ ಸಂಖ್ಯೆ ಗಂಭೀರವಾಗಿ ಪರಿಗಣಿಸಿದ್ದೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿವೆ. ಈ ವರ್ಷ 2500ಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, 550 ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿದರು.